ಅಬುಧಾಬಿ :ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಭರ್ಜರಿ ಪ್ರದರ್ಶನ ತೋರುತ್ತಿರುವ ಕನ್ನಡಿಗ ದೇವದತ್ ಪಡಿಕ್ಕಲ್, ವಿರಾಟ್ ಕೊಹ್ಲಿ ಜೊತೆ ತೆಗೆಸಿಕೊಂಡಿದ್ದ ಹಳೆಯ ಫೋಟೋವೊಂದನ್ನ ಟ್ವೀಟ್ ಮಾಡಿದ್ದರು. ಅದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
ಅಂಡರ್ 16 ತಂಡದ ಆಟಗಾರನಾಗಿದ್ದಾಗ ದೇವದತ್ ಪಡಿಕ್ಕಲ್ ಅಂದು ಆರ್‌ಸಿಬಿ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಜೊತೆಗೆ ತೆಗೆಸಿಕೊಂಡಿರುವ ಫೋಟೋ ಜೊತೆಯಲ್ಲಿ ಪ್ರಸಕ್ತ ಟೂರ್ನಿಯಲ್ಲಿ ಕೊಹ್ಲಿ ಜೊತೆಗೆ ಆಡಿದ ಫೋಟೋವನ್ನು ಟ್ವೀಟ್ ಮಾಡಿದ್ದಾರೆ.
ಉತ್ಸಾಹ, ಉದ್ದೇಶ, ಪ್ರಗತಿ (Passion, Purpose, Progress) ಎಂಬ ಬರಹದೊಂದಿಗೆ ವಿಶೇಷ ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಆರ್‌ಸಿಬಿ ತಂಡ ಈ ಜೊತೆಯಾಟ ತುಂಬಾ ವರ್ಷಗಳ ಹಿಂದೆಯೇ ಆರಂಭವಾದಂತಿದೆ ಎಂದಿದೆ.
ನಿನ್ನೆ ನಡೆದ ಪಂದ್ಯದಲ್ಲಿ 2ನೇ ವಿಕೆಟ್‌ಗೆ ದೇವದತ್ ಪಡಿಕ್ಕಲ್ ಮತ್ತು ವಿರಾಟ್ ಕೊಹ್ಲಿ 99 ರನ್‌ಗಳ ಅಮೋಘ ಜೊತೆಯಾಟವಾಡಿ ತಂಡವನ್ನು ಸುಲಭವಾಗಿ ಗುರಿ ಮುಟ್ಟುವಂತೆ ಮಾಡಿದರು. 46 ಎಸೆತಗಳಲ್ಲಿ 63 ರನ್‌ಗಳನ್ನು ಬಾರಿಸಿದ್ದ ಪಡಿಕ್ಕಲ್ ಜೋಫ್ರ ಆರ್ಚರ್ ಬೌಲಿಂಗ್‌ನಲ್ಲಿ ಔಟ್ ಆಗಿ ಪೆವಿಲಿಯನ್ ಸೇರಿದ್ರು.
ಎಡಗೈ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಈ ವರ್ಷ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದು, ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರು ಅರ್ಧಶತಕ ಸಿಡಿಸಿ ಮಿಂಚಿದ್ದಾರೆ.