ದುಬೈ: ಸತತ ಎರಡು ಸೋಲುಗಳ ನಂತರ ಗೆಲುವಿನ ಸಿಹಿ ಕಂಡಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವು ಇಂಡಿಯನ್ ಪ್ರೀಮಿಯರ್ ಲೀಗ್ನ 14ನೇ ಪಂದ್ಯದಲ್ಲಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ನರಿಗೆ ಸೋಲುಣಿಸಿದ್ದ ಧೋನಿ ಸಾರಥ್ಯದ ಚೆನ್ನೈ ತಂಡ ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿದ್ದು, ವಾರ್ನರ್ ಹುಡುಗರನ್ನು ಮಣಿಸಿ ಗೆಲುವಿನ ಟ್ರ್ಯಾಕ್ಗೆ ಮರಳುವ ಯೋಜನೆಯಲ್ಲಿದೆ.
ಈವರೆಗೆ ಉಭಯ ತಂಡಗಳು 13 ಬಾರಿ ಮುಖಾಮುಖಿಯಾಗಿದ್ದು, ಚೆನ್ನೈ 10 ಪಂದ್ಯಗಳಲ್ಲಿ ಗೆಲುವು ಕಂಡು ಮೇಲುಗೈ ಸಾಧಿಸಿದ್ರೆ, ಸನ್ ರೈಸರ್ಸ್ ತಂಡ ಕೇವಲ 3 ಪಂದ್ಯಗಳಲ್ಲಿ ಜಯ ಕಂಡಿದೆ.
ಐಪಿಎಲ್ ಇತಿಹಾಸದಲ್ಲೇ ಬಲಿಷ್ಠ ತಂಡವೆಂದು ಗುರುತಿಸಿಕೊಂಡಿದ್ದ ಸಿಎಸ್ಕೆ ತಂಡ ಕಳೆದ 2 ಪಂದ್ಯಗಳಿಂದ ನೀರಸ ಪ್ರದರ್ಶನ ತೋರುತ್ತಿದೆ. ಮುರಳಿ ವಿಜಯ್ ಮತ್ತು ವ್ಯಾಟ್ಸನ್ ತಂಡಕ್ಕೆ ಉತ್ತಮ ಆರಂಭ ಒದಗಿಸುವಲ್ಲಿ ವಿಫಲರಾಗುತ್ತಿದ್ದಾರೆ.
ಡು ಪ್ಲೆಸಿಸ್ ಮತ್ತು ನಾಯಕ ಧೋನಿಯನ್ನು ಹೊರತುಪಡಿಸಿ ಯಾವೊಬ್ಬ ಆಟಗಾರರೂ ಹೇಳಿಕೊಳ್ಳುವಂತ ಉತ್ತಮ ಪ್ರದರ್ಶನ ತೋರುತ್ತಿಲ್ಲ. ಮಧ್ಯಮ ಕ್ರಮಾಂಕದಲ್ಲಿ ರಾಯುಡು ಅನುಪಸ್ಥಿತಿಯಿಂದ ತಂಡಕ್ಕೆ ಹಿನ್ನೆಡೆಯಾಗಿದೆ. ಇತ್ತ ಬೌಲಿಂಗ್ನಲ್ಲೂ ಸಿಎಸ್ಕೆ ಆಟಗಾರರು ಸುಧಾರಿಸಬೇಕಿದೆ. ಜಡೇಜಾ, ಪೀಯೂಷ್ ಚಾವ್ಲಾ , ದೀಪಕ್ ಚಹಾರ್ ದುಬಾರಿಯಾಗುತ್ತಿದ್ದಾರೆ.
ಹೈದರಾಬಾದ್ ತಂಡದಲ್ಲೂ ಕೂಡ ಬ್ಯಾಟಿಂಗ್ ವೈಫಲ್ಯ ಎದ್ದು ಕಾಣುತ್ತಿದೆ. ಜಾನಿ ಬೈರ್ ಸ್ಟೋವ್, ವಾರ್ನರ್, ಕೇನ್ ವಿಲಿಯಮ್ಸನ್ ಹೊರತುಪಡಿಸಿ ಉಳಿದ ಆಟಗಾರರು ಹೇಳಿಕೊಳ್ಳುವ ಪ್ರದರ್ಶನ ನೀಡುತ್ತಿಲ್ಲ. ಮನೀಷ್ ಪಾಂಡೆ ಕೂಡ ಕಳೆದ ಪಂದ್ಯದಲ್ಲಿ ನಿರಾಸೆ ಅನುಭವಿಸಿದ್ದರು. ರಶೀದ್ ಖಾನ್ ಬಿಟ್ಟು ಉಳಿದ ಹೈದರಾಬಾದ್ ಬೌಲರ್ಗಳು ದುಬಾರಿಯಾಗುತ್ತಿದ್ದು, ತಂಡಕ್ಕೆ ಭಾರೀ ಹಿನ್ನಡೆಯಾಗಿದೆ.
ಉದ್ಘಾಟನಾ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಯುಡು ಸಂಪೂರ್ಣ ಫಿಟ್ ಆಗಿದ್ದಾರೆ ಎನ್ನಲಾಗಿದೆ. ಇತ್ತ ಬ್ರಾವೋ ಕೂಡ ಮುಂದಿನ ಪಂದ್ಯಕ್ಕೆ ಲಭ್ಯವಾಗಲಿದ್ದಾರೆ ಎಂದು ಸಿಎಸ್ಕೆ ಮೂಲಗಳು ತಿಳಿಸಿದ್ದು, ಇಂದಿನ ಪಂದ್ಯದಲ್ಲಿ ಈ ಇಬ್ಬರೂ ಆಟಗಾರರು ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಿದೆ.