ಅಬುಧಾಬಿ:ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಆಡುವ 11ರ ಬಳಗದಲ್ಲಿ ಕ್ರಿಸ್ ಗೇಲ್ ಸೇರ್ಪಡೆಗೊಂಡಿರುವುದು ತಂಡವನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದು ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಗ್ರೇಮ್ ಸ್ವಾನ್ ಹೇಳಿದ್ದಾರೆ.
"ಕಿಂಗ್ಸ್ ಇಲೆವೆನ್ ಪಂಜಾಬ್ ಪ್ರಬಲ ತಂಡವಾಗಿದ್ದು ಈ ಬಗ್ಗೆ ಯಾವುದೇ ಸಂದೇಹವಿಲ್ಲ. ಆದರೆ ಕ್ರಿಸ್ ಗೇಲ್ ಆಗಮನದ ನಂತರ ವಿಭಿನ್ನವಾಗಿ ಕಾಣುತ್ತಿದೆ" ಎಂದು ಸ್ವಾನ್ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನ ಆರಂಭಿಕ ಪಂದ್ಯಗಳಲ್ಲಿ ಗೇಲ್ ಕಣಕ್ಕಿಳಿಯಲಿಲ್ಲ, ಈ ವೇಳೆ ತಂಡವು ಕಳಪೆ ಆರಂಭ ಪಡೆಯಿತು. ಆದರೆ ಈಗ ಅದ್ಭುತವಾಗಿ ಕಂಬ್ಯಾಕ್ ಮಾಡಿದೆ. ಕಳೆದ 5 ಪಂದ್ಯ ಗಳಲ್ಲಿ ಸತತವಾಗಿ ಗೆಲುವು ಸಾಧಿಸಿದೆ.
ಇಂದು ಪಂಜಾಬ್ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗುತ್ತಿದ್ದು, ಸ್ಟೀವ್ ಸ್ಮಿತ್ ನೇತೃತ್ವದ ತಂಡವು ತಮ್ಮ ವಿದೇಶಿ ಆಟಗಾರರನ್ನು ನೆಚ್ಚಿಕೊಳ್ಳಬೇಕು ಎಂದು ಸ್ವಾನ್ ಅಭಿಪ್ರಾಯ ಪಟ್ಟಿದ್ದಾರೆ.
"ರಾಜಸ್ಥಾನ ರಾಯಲ್ಸ್ ತಮ್ಮ ವಿದೇಶಿ ಆಟಗಾರರನ್ನು ನಂಬಬೇಕಾಗಿದೆ. ಬಟ್ಲರ್, ಸ್ಟೋಕ್ಸ್, ಸ್ಮಿತ್ ಮತ್ತು ಆರ್ಚರ್ ಅತ್ಯಂತ ಪ್ರತಿಭಾವಂತ ವಿದೇಶಿ ಆಟಗಾರರು. ಈ ನಾಲ್ವು ಆಟಗಾರರು ನಿರ್ಭೀತಿಯಿಂದ ಆಡಬೇಕು, ಒಂದು ವೇಳೆ ಗೆಲುವು ಸಾಧಿಸಲು ಕಷ್ಟವಾದರೂ ತೆವಾಟಿಯ ನೆರವಿಗೆ ಬರಲಿದ್ದಾರೆ" ಎಂದು ತಿಳಿಸಿದ್ದಾರೆ.
ಟಾಪ್ ಫೋರ್ ಹಂತದಲ್ಲಿ ಸ್ಥಾನ ಪಡೆಯುವ ಆಸೆ ಹೊಂದಿರುವ ರಾಜಸ್ಥಾನ ಮತ್ತು ಪಂಜಾಬ್ ತಂಡಗಳಿಗೆ ಇದು ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ. 12 ಪಂದ್ಯಗಳಿಂದ 12 ಅಂಕ ಹೊಂದಿರುವ ಪಂಜಾಬ್ ಪಾಯಿಂಟ್ಸ್ ಟೇಬಲ್ನಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಇತ್ತ ರಾಜಸ್ಥಾನ ತಂಡ 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.