ದುಬೈ: ಟಿ20 ವಿಶ್ವಕಪ್ ಟೂರ್ನಿ ರಂಗೇರುತ್ತಿದೆ. ಸೂಪರ್ 12 ಹಂತಕ್ಕೇರಲು ತಂಡಗಳ ನಡುವೆ ಕಾದಾಟ ಆರಂಭವಾಗಿದೆ. ನಿನ್ನೆ ನಡೆದ ಬಾಂಗ್ಲಾದೇಶ ಹಾಗೂ ಓಮನ್ ನಡುವಿನ ಪಂದ್ಯದಲ್ಲಿ ಬಾಂಗ್ಲಾ ಜಯ ದಾಖಲಿಸಿ ಟೂರ್ನಿಯಲ್ಲಿ ಕಮ್ಬ್ಯಾಕ್ ಮಾಡಿತು.
ಆದರೆ ಇದೇ ಪಂದ್ಯದಲ್ಲಿ ಬೌಲಿಂಗ್ ಮಾಡುತ್ತಿದ್ದ ವೇಳೆ ಫಯಾಜ್ ಭಟ್ ಕ್ಯಾಚ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಾಂಗ್ಲಾ ಆಟಗಾರ ಮೆಹದಿ ಹಸನ್ ನೀಡಿದ್ದ ಕ್ಯಾಚ್ ಅನ್ನು ಡೈವ್ ಮಾಡಿ ಅವರು ಗಮನಸೆಳೆದರು. ಈ ಕ್ಯಾಚ್ ವೈರಲ್ ಆಗುತ್ತಿದ್ದಂತೆ ಈತ ಯಾರು? ಎಂಬ ಪ್ರಶ್ನೆಗೆ ಒಂದಿಷ್ಟು ಮಂದಿ ಉತ್ತರ ಕಂಡುಕೊಂಡಿದ್ದಾರೆ.
ಸದ್ಯ ಅವರ ಸ್ಪೀಡ್ ಬೌಲಿಂಗ್ ದಿಗ್ಗಜರ ಮೆಚ್ಚುಗೆ ಗಳಿಸಿದೆ. ಪಾಕಿಸ್ತಾನದ ಮಾಜಿ ಆಟಗಾರ ಇಮ್ರಾನ್ ಖಾನ್ ಹಾಗೂ ಆಸ್ಟ್ರೇಲಿಯಾ ಬೌಲರ್ ಬ್ರೆಟ್ ಲೀ ಅವರ ಬೌಲಿಂಗ್ ಮಾದರಿ ನೆನಪಿಸುತ್ತಿದೆ ಎಂದು ಹೇಳಲಾಗುತ್ತಿದೆ.
ಫಯಾಜ್ ಭಟ್ ಪಾಕಿಸ್ತಾನ ಅಂಡರ್-19 ತಂಡದಲ್ಲಿ ಹಲವು ವರ್ಷ ಆಡಿದ್ದಾರೆ. ಪಾಕ್ ಪರವಾಗಿ 2010ರ ವಿಶ್ವಕಪ್ನಲ್ಲೂ ಆಡಿ ಭಾರತ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್ ಪಡೆದು ಮಿಂಚಿದ್ದರು. ತಮ್ಮ ಮೊದಲ ಎಸೆತದಲ್ಲಿಯೇ ಕನ್ನಡಿಗ ಕೆ.ಎಲ್.ರಾಹುಲ್ ವಿಕೆಟ್ ಪಡೆದರೆ, ಬಳಿಕ ಮಯಾಂಕ್ ಅಗರ್ವಾಲ್ ವಿಕೆಟ್ ಸಹ ಪಡೆದಿದ್ದರು.
ಆದರೆ ಈ ವಿಶ್ವಕಪ್ ಬಳಿಕ ಫಯಾಜ್ ಪಾಕಿಸ್ತಾನ ತೊರೆದು ಓಮನ್ ತೆರಳಿದ್ದರು. ಅಲ್ಲಿ 2018ರ ಏಷ್ಯಾ ಕಪ್ ವೇಳೆ ಮೊದಲ ಬಾರಿಗೆ ಓಮನ್ ತಂಡಕ್ಕೆ ಆಯ್ಕೆಯಾಗಿದ್ದರು.