ಉಜ್ಜಯಿನಿ (ಮಧ್ಯಪ್ರದೇಶ): ವಿಶ್ವವಿಖ್ಯಾತ ಉಜ್ಜಯಿನಿಯ ಬಾಬಾ ಮಹಾಕಾಳೇಶ್ವರ ದೇವಾಲಯಕ್ಕೆ ಭಾರತ ತಂಡದ ಆಟಗಾರರಾದ ಸೂರ್ಯಕುಮಾರ್ ಯಾದವ್, ಕುಲದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಹಾಗು ಭಾರತೀಯ ಕ್ರಿಕೆಟ್ ಸಿಬ್ಬಂದಿ ಸೇರಿದಂತೆ ಅನೇಕರು ಭಾನುವಾರ ಭೇಟಿ ನೀಡಿದರು. ಎಲ್ಲರೂ ಮಹಾಕಾಳನ ದಿವ್ಯ ಸಾನಿಧ್ಯದಲ್ಲಿ ಅಲೌಕಿಕ ಭಸ್ಮಾರತಿಯಲ್ಲಿ ಪಾಲ್ಗೊಂಡರು. ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ಕ್ರಿಕೆಟಿಗ ರಿಷಬ್ ಪಂತ್ ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿ, ಪೂಜೆ ಸಲ್ಲಿಸಿದರು.
ಸೂರ್ಯಕುಮಾರ್ ಯಾದವ್ ಮಾತನಾಡಿ, "ರಿಷಬ್ ಪಂತ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದೆವು. ತಂಡಕ್ಕೆ ಅವರ ಪುನರಾಗಮನ ನಮಗೆ ಬಹಳ ಮುಖ್ಯ. ನಾವು ಈಗಾಗಲೇ ನ್ಯೂಜಿಲೆಂಡ್ ವಿರುದ್ಧದ ಸರಣಿ ಗೆದ್ದಿದ್ದೇವೆ. ಕಿವೀಸ್ ವಿರುದ್ಧದ ಅಂತಿಮ ಪಂದ್ಯವನ್ನು ಎದುರು ನೋಡುತ್ತಿದ್ದೇವೆ" ಎಂದರು.
ಜನವರಿ 24ರಂದು ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು 3ನೇ ಏಕದಿನ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಭಾನುವಾರ ಮಧ್ಯಾಹ್ನ ಉಭಯ ತಂಡಗಳು ರಾಯ್‌ಪುರದಿಂದ ವಿಶೇಷ ವಿಮಾನದ ಮೂಲಕ ಇಂದೋರ್ ತಲುಪಿವೆ. ವಿಮಾನ ನಿಲ್ದಾಣದ ವಿಐಪಿ ಗೇಟ್‌ನಿಂದ ತಂಡಗಳು ಬಸ್ ಹತ್ತಿ ನೇರವಾಗಿ ಹೋಟೆಲ್ ಕಡೆ ಪ್ರಯಾಣ ಬೆಳೆಸಿದ್ದವು. ಭಾರತೀಯ ತಂಡವು ಹೋಟೆಲ್ ರಾಡಿಸನ್ ಬ್ಲೂ ಮತ್ತು ನ್ಯೂಜಿಲೆಂಡ್ ತಂಡ ಮ್ಯಾರಿಯೆಟ್ ಹೋಟೆಲ್ನಲ್ಲಿ ವಾಸ್ಸವ್ಯ ಹೂಡಿದ್ದಾರೆ. ಭಾರತೀಯ ತಂಡದ ಆಟಗಾರರನ್ನು ವೀಕ್ಷಿಸಲು ಹೊಟೇಲ್‌ನ ಹೊರಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಬಸ್‌ಗಳು ನೇರವಾಗಿ ಹೋಟೆಲ್ ಪ್ರವೇಶಿಸಿದ್ದು, ನಿರಾಸೆ ಮೂಡಿಸಿತು.