ಲಂಡನ್:ಆಸ್ಟ್ರೇಲಿಯಾ ತಂಡ ನೀಡಿದ 444 ರನ್ ಗೆಲುವಿನ ಗುರಿಯು ಖಂಡಿತವಾಗಿಯೂ ಬಹಳ ಸವಾಲಿನದಾಗಿತ್ತು. ಆದರೆ, ನಾವು ಎಷ್ಟೇ ಹಿನ್ನಡೆಯಲ್ಲಿದ್ದರೂ ಸಹ ಗೆಲುವಿನ ಭರವಸೆ ಇದ್ದೇ ಇರುತ್ತದೆ. ಕಳೆದೆರಡು ವರ್ಷಗಳಲ್ಲಿ ಹಲವು ಟೆಸ್ಟ್ ಪಂದ್ಯಗಳಲ್ಲಿ ಕಠಿಣ ಪರಿಸ್ಥಿತಿಯಲ್ಲೂ ಹೋರಾಟ ನಡೆಸಿದ್ದೇವೆ. ಆದರೆ ಈ ಪಂದ್ಯ ಗೆಲ್ಲಲು ದೊಡ್ಡ ಜೊತೆಯಾಟದ ಅಗತ್ಯವಿತ್ತು, ಅದಕ್ಕೆ ತಕ್ಕಂತೆ ನಮ್ಮಲ್ಲಿ ಪ್ರಮುಖ ಆಟಗಾರರಿದ್ದರೂ ಸಹ ಆಸೀಸ್ ಮೇಲುಗೈ ಸಾಧಿಸಿತು ಎಂದು ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಸೋಲಿನ ಬಳಿಕ ಭಾರತ ತಂಡದ ಕೋಚ್ ರಾಹುಲ್ ದ್ರಾವಿಡ್ ಪ್ರತಿಕ್ರಿಯಿಸಿದ್ದಾರೆ.
ಲಂಡನ್ನ ಓವಲ್ ಮೈದಾನದಲ್ಲಿ ಮುಕ್ತಾಯವಾದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್ಗಳಿಂದ ಸೋಲು ಕಂಡ ಭಾರತ ತಂಡ ಸತತ ಎರಡನೇ ಬಾರಿಗೆ ನಿರ್ಣಾಯಕ ಪಂದ್ಯದಲ್ಲಿ ಸೋಲುಂಡಿದೆ. ಸೋಲಿನ ನಂತರ ಮಾತನಾಡಿದ ದ್ರಾವಿಡ್, ''ಮೊದಲ ಇನ್ನಿಂಗ್ಸ್ನಲ್ಲಿ 469 ರನ್ ಬಿಟ್ಟುಕೊಡುವಂತಹ ಪಿಚ್ ಅದಾಗಿರಲಿಲ್ಲ. ಆದರೆ ಮೊದಲ ದಿನದ ಕೊನೆಯ ಅವಧಿಯಲ್ಲಿ ಹೆಚ್ಚಿನ ರನ್ ಹರಿದುಬಂತು. ಯಾವ ಲೈನ್ ಹಾಗೂ ಲೆಂಥ್ನಲ್ಲಿ ಬೌಲಿಂಗ್ ಮಾಡಬೇಕೆಂಬುದು ನಮಗೆ ತಿಳಿದಿತ್ತು. ನಮ್ಮ ಬೌಲರ್ಗಳ ಲೈನ್ ಕೆಟ್ಟದಾಗಿರಲಿಲ್ಲ. ಆದರೆ ತುಂಬಾ ವೈಡ್ ಲೈನ್ ಎಸೆತಗಳು ದುಬಾರಿಯಾದವು. ಬ್ಯಾಟರ್ ಹೆಡ್ ಅದರ ಸದುಪಯೋಗ ಪಡೆದರು. ಪಿಚ್ ಮೇಲೆ ಸಾಕಷ್ಟು ಹುಲ್ಲು ಹಾಗೂ ಮೋಡ ಕವಿದ ವಾತಾವರಣ ಇದ್ದುದರಿಂದ ಟಾಸ್ ಗೆದ್ದು ಮೊದಲು ಬೌಲಿಂಗ್ಗೆ ಆಯ್ಕೆ ಮಾಡಿಕೊಂಡೆವು'' ಎಂದು ಹೇಳಿದರು.
''ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಮಾಡುವುದು ಸುಲಭ ಎಂಬುದನ್ನು ನಾವು ಈ ಹಿಂದೆಯೂ ನೋಡಿದ್ದೇವೆ. ಆದರೆ, 4 ಹಾಗೂ 5ನೇ ದಿನ ಹೆಚ್ಚಿನ ನೆರವು ಇರಲಿಲ್ಲ. 70 ರನ್ಗೆ 3 ವಿಕೆಟ್ ಪಡೆದರೂ ಸಹ ಬಳಿಕ ನಿಯಂತ್ರಣ ಕಳೆದುಕೊಂಡೆವು. ಕಳೆದ ಬಾರಿ ಎಡ್ಜ್‌ಬಾಸ್ಟನ್‌ನಲ್ಲಿ ಆಡಿದಾಗಲೂ ಅಂತಿಮ ದಿನ ಪಿಚ್ ಬ್ಯಾಟಿಂಗ್ಗೆ ಸುಲಭವಾಗಿತ್ತು. 300ಕ್ಕೂ ಅಧಿಕ ರನ್ ಗುರಿ ತಲುಪಲಾಗಿತ್ತು'' ಎಂದು ದ್ರಾವಿಡ್ ತಿಳಿಸಿದರು.