ಮುಂಬೈ(ಮಹಾರಾಷ್ಟ್ರ):ಇಲ್ಲಿನ ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವಇಂಗ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ನಲ್ಲಿ ಭಾರತದ ವನಿತೆಯರಿಗೆ ಮುನ್ನಡೆ ಸಿಕ್ಕಿದೆ. ದೀಪ್ತಿ ಶರ್ಮಾ ಅವರ ಮಾರಕ ಸ್ಪಿನ್ ಬೌಲಿಂಗ್ ದಾಳಿಯ ಮುಂದೆ ಇಂಗ್ಲೆಂಡ್ ಬ್ಯಾಟರ್ಗಳು ಮುಂಕಾದರು. ಶರ್ಮಾ ಅವರ ಟೆಸ್ಟ್ ವೃತ್ತಿ ಜೀವನದ ಚೊಚ್ಚಲ 5 ವಿಕೆಟ್ ಸಾಧನೆ ಮತ್ತು ಇತರ ಬೌಲರ್ಗಳ ಕರಾರುವಾಕ್ ದಾಳಿಗೆ ಇಂಗ್ಲೆಂಡ್ ವನಿತೆಯರ ತಂಡ 35.3 ಓವರ್ ಆಟವಾಡಿ 136 ರನ್‌ಗಳಿಗೆ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು. ಈ ಮೂಲಕ ಭಾರತ 292 ರನ್ಗಳ ಮುನ್ನಡೆ ಸಾಧಿಸಿದೆ.
ನಿನ್ನೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತದ ಶುಭಾ ಸತೀಶ್, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಮತ್ತು ಯಾಸ್ತಿಕಾ ಭಾಟಿಯಾ ಅವರ ಅರ್ಧಶತಕದ ನೆರವಿನಿಂದ ಮೊದಲ ದಿನದಂತ್ಯಕ್ಕೆ 94 ಓವರ್ಗೆ 7 ವಿಕೆಟ್ ಕಳೆದುಕೊಂಡು 410 ರನ್ ಕಲೆಹಾಕಿತ್ತು. ಮೂರು ವಿಕೆಟ್ ಉಳಿಸಿಕೊಂಡು ಎರಡನೇ ದಿನಾರಂಭಿಸಿದ ತಂಡ 10.3 ಓವರ್ ಆಡಿ ಆಲ್ಔಟಾಯಿತು. ಮೊದಲ ಇನ್ನಿಂಗ್ಸ್ನಲ್ಲಿ ಭಾರತ 428 ರನ್ ಕಲೆಹಾಕಿತ್ತು.
ಇದಾದ ನಂತರ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ ತಂಡಕ್ಕೆ ರೇಣುಕಾ ಠಾಕೂರ್ ಸಿಂಗ್ ಮೊದಲ ಶಾಕ್ ಕೊಟ್ಟರು. ತಂಡದ ಮೊತ್ತ 13 ಆಗಿದ್ದಾಗ ಸೋಫಿಯಾ ಡಂಕ್ಲಿ (11) ವಿಕೆಟ್ ಒಪ್ಪಿಸಿದರು. ಅವರ ಬೆನ್ನಲ್ಲೇ ನಾಯಕಿ ಹೀದರ್ ನೈಟ್ ವಿಕೆಟ್ ಅನ್ನು ಪೂಜಾ ವಸ್ತ್ರಾಕರ್ ಉರುಳಿಸಿದರು.
ಮೂರನೇ ವಿಕೆಟ್ಗೆ ಒಂದಾದ ಟಮ್ಮಿ ಬ್ಯೂಮಾಂಟ್ ಮತ್ತು ನ್ಯಾಟ್ ಸ್ಕಿವರ್-ಬ್ರಂಟ್ ತಂಡವನ್ನು ಕಾಡಲು ಆರಂಭಿಸಿದರು. ವಿಕೆಟ್ ಕಾಯ್ದುಕೊಂಡು ಒಂದೊಂದೇ ರನ್ ಕದಿಯಲು ಆರಂಭಿಸಿದರು. ಈ ಜೋಡಿ ಮೂರನೇ ವಿಕೆಟ್ಗೆ ಅರ್ಧಶತಕದ ತಾಳ್ಮೆಯ ಜೊತೆಯಾಟವಾಡಿತು. ಈ ವೇಳೆ ಸಿಕ್ಕ ಒಂದು ಅವಕಾಶದಲ್ಲಿ ಟಮ್ಮಿ ಬ್ಯೂಮಾಂಟ್ ಅವರನ್ನು ಪೂಜಾ ವಸ್ತ್ರಾಕರ್ ಡೈರೆಕ್ಟ್ ಹಿಟ್ ಮೂಲಕ ಔಟ್ ಮಾಡಿದರು.