ಮುಂಬೈ (ಮಹಾರಾಷ್ಟ್ರ): ಇಲ್ಲಿನ ವಾಂಖೆಡೆ ಮೈದಾನದಲ್ಲಿ ಭಾರತದ ವನಿತೆಯರ ಶ್ರಮಕ್ಕೆ ತಕ್ಕ ಫಲ ಸಿಗಲಿಲ್ಲ. ಕಠಿಣ ಹೋರಾಟದ ನಡುವೆಯೂ 3 ರನ್ಗಳಿಂದ ಸೋತು ಸರಣಿಯನ್ನು ಹರ್ಮನ್ಪ್ರೀತ್ ಕೌರ್ ಪಡೆ ಕಳೆದುಕೊಂಡಿತು. ಮೊದಲ ಇನ್ನಿಂಗ್ಸ್ನಲ್ಲಿ ದೀಪ್ತಿ ಶರ್ಮಾ ಕಿತ್ತ ವಿಕೆಟ್ ಮತ್ತು ರಿಚಾ ಘೋಷ್ ಅವರ 96 ರನ್ಗಳ ಇನ್ನಿಂಗ್ಸ್ ವ್ಯರ್ಥವಾಯಿತು. 259 ರನ್ಗಳ ಗುರಿ ಬೆನ್ನತ್ತಿದ ಭಾರತ 50 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದುಕೊಂಡು 255 ರನ್ ಗಳಿಸಷ್ಟೇ ಶಕ್ತವಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 50 ಓವರ್ಗೆ 8 ವಿಕೆಟ್ ನಷ್ಟಕ್ಕೆ 258 ರನ್ ಕಲೆಹಾಕಿ ಸ್ಪರ್ಧಾತ್ಮಕ ಗುರಿಯನ್ನು ನೀಡಿತು. ಆಸೀಸ್ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ (63 ರನ್) ಮತ್ತು ಎಲ್ಲಿಸ್ ಪೆರ್ರಿ (50 ರನ್) ಅವರ ಅರ್ಧಶತಕ ತಂಡಕ್ಕೆ ಬಲ ನೀಡಿತು. ಭಾರತ ಈ ಇನ್ನಿಂಗ್ಸ್ನಲ್ಲಿ 7 ಕ್ಯಾಚ್ ಕೈಚೆಲ್ಲಿತು. ಬೌಲಿಂಗ್ನಲ್ಲಿ ದೀಪ್ತಿ ಶರ್ಮಾ 10 ಓವರ್ ಮಾಡಿ 38 ರನ್ ಕೊಟ್ಟು 5 ವಿಕೆಟ್ ಕಿತ್ತರೆ, ಪೂಜಾ, ಶ್ರೇಯಾಂಕಾ ಪಾಟೀಲ್ ಮತ್ತು ಸ್ನೇಹಾ ರಾಣಾ ತಲಾ ಒಂದು ವಿಕೆಟ್ ಪಡೆದರು.
259 ರನ್ಗಳ ಗುರಿ ಬೆನ್ನತ್ತಿದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. 14 ರನ್ಗಳಿಸಿ ಯಾಸ್ತಿಕಾ ಭಾಟಿಯಾ ಔಟ್ ಆದರೆ, 34 ರನ್ಗೆ ಸ್ಮೃತಿ ಮಂಧಾನ ಪೆವಿಲಿಯನ್ ಹಾದಿ ಹಿಡಿದರು. ಸ್ಪರ್ಧಾತ್ಮಕ ಗುರಿಯನ್ನು ಬೆನ್ನತ್ತಿದ ತಂಡಕ್ಕೆ ಆರಂಭಿಕ ವಿಕೆಟ್ ಪತನ ಒತ್ತಡಕ್ಕೆ ಕಾರಣವಾಯಿತು.