ನವದೆಹಲಿ:ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ಕಣಕ್ಕಿಳಿಯಲಿದ್ದು, ಈ ಮೂಲಕ ಟೀಂ ಇಂಡಿಯಾ ಹೊಸದೊಂದು ದಾಖಲೆಗೆ ಪಾತ್ರವಾಗಲಿದೆ.
ಮುಂದಿನ ತಿಂಗಳು ಭಾರತ - ನ್ಯೂಜಿಲ್ಯಾಂಡ್ ನಡುವೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ತಟಸ್ಥ ಸ್ಥಳದಲ್ಲಿ ನಡೆಯುತ್ತಿದ್ದು, 89 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಇಂತಹ ಪಂದ್ಯದಲ್ಲಿ ಭಾರತ ಮೊದಲ ಸಲ ಭಾಗಿಯಾಗುತ್ತಿದೆ.
ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ತಟಸ್ಥ ಸ್ಥಳದಲ್ಲಿ
ಈಗಾಗಲೇ ನಿರ್ಧಾರಗೊಂಡಿದ್ದ ಪ್ರಕಾರ ಕ್ರಿಕೆಟ್ ಕಾಶಿ ಲಾರ್ಡ್ಸ್ನಲ್ಲಿ ಫೈನಲ್ ಪಂದ್ಯ ನಡೆಯಬೇಕಾಗಿತ್ತು. ಆದರೆ, ಇದೀಗ ಉಭಯ ದೇಶದ ಕ್ರಿಕೆಟ್ ಮಂಡಳಿ ಸೌತಾಂಪ್ಟನ್ನಲ್ಲಿ ಫೈನಲ್ ಪಂದ್ಯ ನಡೆಸಲು ನಿರ್ಧರಿಸಿದ್ದರಿಂದ ತಟಸ್ಥ ಸ್ಥಳದಲ್ಲಿ ಈ ಮ್ಯಾಚ್ ನಡೆಯಲಿದೆ.
89 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಭಾರತ ಇದೇ ಮೊದಲ ಬಾರಿಗೆ ಇಂತಹ ಸರಣಿಯಲ್ಲಿ ಭಾಗಿಯಾಗುತ್ತಿದೆ. ಈ ಹಿಂದೆ 1999ರಲ್ಲಿ ತಟಸ್ಥ ಸ್ಥಳದಲ್ಲಿ ಭಾರತ ಟೆಸ್ಟ್ ಪಂದ್ಯ ಆಡುವ ಪಡೆದುಕೊಂಡಿತ್ತು. ಆದರೆ, ಏಷ್ಯನ್ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಲು ವಿಫಲಗೊಂಡಿದ್ದರಿಂದ ಪಾಕಿಸ್ತಾನ - ಶ್ರೀಲಂಕಾ ಇದರಲ್ಲಿ ಭಾಗಿಯಾಗಿ ತಟಸ್ಥ ಸ್ಥಳದಲ್ಲಿ ಟೆಸ್ಟ್ ಪಂದ್ಯ ಆಡಿದ್ದವು.
ಭಾರತ - ಬಾಂಗ್ಲಾ ತಟಸ್ಥ ಸ್ಥಳದಲ್ಲಿ ಆಡಿಲ್ಲ ಕ್ರಿಕೆಟ್
ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಯಿಂದ ಟೆಸ್ಟ್ ಸ್ಥಾನಮಾನ ಪಡೆದ 12 ದೇಶಗಳ ಪೈಕಿ, ಭಾರತ ಹಾಗೂ ಬಾಂಗ್ಲಾದೇಶ ಇಲ್ಲಿಯವರೆಗೆ ತಟಸ್ಥ ಸ್ಥಳದಲ್ಲಿ ಟೆಸ್ಟ್ ಪಂದ್ಯ ಆಡಿಲ್ಲ. ಆದರೆ, ಇದೀಗ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭಾಗಿಯಾಗುವ ಮೂಲಕ ಭಾರತ ಈ ರೆಕಾರ್ಡ್ ಬ್ರೇಕ್ ಮಾಡಲಿದೆ. ಭಾರತ - ನ್ಯೂಜಿಲ್ಯಾಂಡ್ ನಡುವೆ ಜೂನ್ 18ರಿಂದ ಇಂಗ್ಲೆಂಡ್ನ ಸೌತಾಂಪ್ಟನ್ನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಎರಡು ದೇಶಗಳಿಗೆ ಇದು ತಟಸ್ಥ ಸ್ಥಳವಾಗಿದೆ.
ಪಾಕಿಸ್ತಾನದಲ್ಲಿ ಭದ್ರತಾ ಬೆದರಿಕೆ ಗಮನದಲ್ಲಿಟ್ಟುಕೊಂಡು ವಿದೇಶಿ ತಂಡಗಳು ಒಂದು ದಶಕಕ್ಕೂ ಹೆಚ್ಚು ಕಾಲ ಅಲ್ಲಿಗೆ ಭೇಟಿ ನೀಡಿರಲಿಲ್ಲ. ಈ ಮಧ್ಯೆ ಪಾಕ್ ಯುಎಇ ಮತ್ತು ಶ್ರೀಲಂಕಾದಲ್ಲಿ ತನ್ನ ತವರಿನ ಪಂದ್ಯ ನಡೆಸಿತ್ತು. ಈ ಮಧ್ಯೆ ಅನೇಕ ದೇಶಗಳು ತಟಸ್ಥ ಸ್ಥಳದಲ್ಲಿ ಟೆಸ್ಟ್ ಪಂದ್ಯ ಆಡುವ ಅವಕಾಶ ಪಡೆದುಕೊಂಡಿವೆ.
ಯಾವೆಲ್ಲ ತಂಡಗಳು ತಟಸ್ಥ ಸ್ಥಳದಲ್ಲಿ ಕ್ರಿಕೆಟ್ ಆಡಿವೆ!?
ನ್ಯೂಜಿಲ್ಯಾಂಡ್ 2014ರಿಂದ 2018ರವರೆಗೆ ತಟಸ್ಥ ಸ್ಥಳದಲ್ಲಿ ಆರು ಪಂದ್ಯಗಳನ್ನಾಡಿದ್ದು, ಅದರಲ್ಲಿ ಮೂರು ಪಂದ್ಯ ಗೆದ್ದು, ಎರಡಲ್ಲಿ ಸೋಲು ಕಂಡಿದೆ. ಅಂದ ಹಾಗೆ,109 ವರ್ಷಗಳ ಹಿಂದೆ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ನಡುವೆ ಮ್ಯಾಂಚೆಸ್ಟರ್ನಲ್ಲಿ 27-28 ಮೇ 1912ರಲ್ಲಿ ತಟಸ್ಥ ಸ್ಥಳದಲ್ಲಿ ಮೊದಲ ಕ್ರಿಕೆಟ್ ಪಂದ್ಯ ನಡೆದಿತ್ತು. ತಟಸ್ಥ ಸ್ಥಳದಲ್ಲಿ ಪಾಕ್ ಇದುವರೆಗೆ 39 ಪಂದ್ಯಗಳಲ್ಲಿ ಭಾಗಿಯಾಗಿದೆ.
ಉಳಿದಂತೆ ಆಸ್ಟ್ರೇಲಿಯಾ 12 ಪಂದ್ಯ, ಶ್ರೀಲಂಕಾ 9, ದಕ್ಷಿಣ ಆಫ್ರಿಕಾ 7 ಮತ್ತು ನ್ಯೂಜಿಲ್ಯಾಂಡ್, ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಲಾ ಮೂರು ಪಂದ್ಯಗಳನ್ನ ತಟಸ್ಥ ಸ್ಥಳದಲ್ಲಿ ಆಡಿದ್ದು, ಅಫ್ಘಾನಿಸ್ತಾನ ಸಹ ನಾಲ್ಕು ಪಂದ್ಯಗಳನ್ನಾಡಿದೆ.