ನವದೆಹಲಿ: ಐಸಿಸಿ ಟಿ20 ವಿಶ್ವಕಪ್ 2024ಕ್ಕೆ ಇನ್ನು ಕೇವಲ 1 ವರ್ಷಕ್ಕಿಂತ ಕಡಿಮೆ ಸಮಯ ಇದೆ. ವರದಿಯೊಂದರ ಪ್ರಕಾರ, 2024ರ ಟಿ-20 ವಿಶ್ವಕಪ್ ಜೂನ್ 4 ರಿಂದ ಜೂನ್ 30 ರವರೆಗೆ ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಆಯೋಜಿಸಲಾಗುತ್ತದೆ. ಭಾರತ ತಂಡ ಈ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್ ಆಯೋಜಿಸುತ್ತಿದೆ. ಇದರ ಜೊತೆಗೆ ಟಿ20 ವಿಶ್ವಕಪ್‌ಗೆ ತಂಡವನ್ನು ಸಿದ್ಧ ಪಡಿಸಿಕೊಳ್ಳುವ ಅಗತ್ಯತೆಯೂ ಇದೆ.
ಬಿಸಿಸಿಐನ ವಿಶ್ವಕಪ್‌ಗೆ ಈಗಾಗಲೇ ಪ್ರಯೋಗಾತ್ಮಕವಾಗಿ ತಂಡವನ್ನು ಸಿದ್ಧಪಡಿಸುತ್ತಿದೆ. ಹಾರ್ದಿಕ್ ನಾಯಕತ್ವದಲ್ಲಿ ಯುವ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಟ್ಟುತ್ತಿದ್ದು, 2007 ರ ಇತಿಹಾಸವನ್ನು ಮತ್ತೆ ನೋಡುವ ಬಯಕೆ ಅಭಿಮಾನಿಗಳಲ್ಲಿದೆ. ವಿಶ್ವಕಪ್‌ಗೂ ಮುನ್ನ ಭಾರತ ತಂಡ ಯಾವೆಲ್ಲ ದೇಶದೊಂದಿಗೆ ದ್ವಿಪಕ್ಷೀಯ ಟಿ-20 ಪಂದ್ಯಗಳನ್ನು ಆಡಲಿದೆ ಎಂಬುದು ಈ ವರದಿಯಲ್ಲಿ ನೀಡಲಾಗಿದೆ.
ಟಿ20 ವಿಶ್ವಕಪ್ ಆರಂಭಕ್ಕೂ ಮುನ್ನ ಭಾರತ 5 ತಂಡಗಳ ವಿರುದ್ಧ ಒಟ್ಟು 19 ಟಿ-20 ಪಂದ್ಯಗಳನ್ನು ಆಡಬೇಕಿದೆ. ಈ ಸಮಯದಲ್ಲಿ, ಭಾರತವು ತವರಿನಿಂದ ಹೊರಗೆ 3 ಟಿ 20 ಸರಣಿಗಳನ್ನು ಆಡಿದರೆ, ತವರಿನಲ್ಲಿ 2 ಟಿ 20 ಸರಣಿಗಳನ್ನು ಆಡಬೇಕಾಗಿದೆ. ಈ ಅವಧಿಯಲ್ಲಿ ಭಾರತವು ವೆಸ್ಟ್ ಇಂಡೀಸ್, ಐರ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಪ್ರವಾಸಗಳನ್ನು ಮಾಡಬೇಕಾಗಿದೆ. ಅದೇ ಸಮಯದಲ್ಲಿ ಭಾರತವು ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ತವರಿನ ಸರಣಿಗಳನ್ನು ಆಡಲಿದೆ.
ವೆಸ್ಟ್ ಇಂಡೀಸ್ ವಿರುದ್ಧ 5 ಟಿ20 ಪಂದ್ಯಗಳ ಸರಣಿ:ಟೀಂ ಇಂಡಿಯಾ ಪ್ರಸ್ತುತ ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದು, ಆಗಸ್ಟ್ 3 ರಿಂದ ಆಗಸ್ಟ್ 13 ರವರೆಗೆ 5 ಪಂದ್ಯಗಳ ಟಿ20 ಸರಣಿ ಆಡಬೇಕಿದೆ. 2024 ರ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಬಿಸಿಸಿಐ ಈ ಸರಣಿಗೆ ಹಲವು ಯುವ ಆಟಗಾರರಿಗೆ ಅವಕಾಶ ನೀಡಿದೆ. ತಂಡದ ನಾಯಕತ್ವವನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕೈಗೆ ನೀಡಲಾಗಿದೆ.
ಐರ್ಲೆಂಡ್ ವಿರುದ್ಧ 3 ಟಿ20 ಸರಣಿ:ವೆಸ್ಟ್ ಇಂಡೀಸ್ ಪ್ರವಾಸದ ನಂತರ, ಟೀಂ ಇಂಡಿಯಾ ಆಗಸ್ಟ್ 18 ರಿಂದ ಆಗಸ್ಟ್ 23 ರವರೆಗೆ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದಲ್ಲಿ ಭಾರತ 3 ಟಿ20 ಪಂದ್ಯಗಳ ಸರಣಿಯನ್ನು ಆಡಬೇಕಿದೆ. ಈ ಪ್ರವಾಸದಲ್ಲಿಯೂ, ಬಿಸಿಸಿಐ ಹೊಸ ಆಟಗಾರರಿಗೆ ಆಡಲು ಅವಕಾಶ ನೀಡುತ್ತದೆ ಮತ್ತು ಪ್ರವಾಸಕ್ಕೆ ಬಿ ತಂಡವನ್ನು ಕಳುಹಿಸುತ್ತದೆ ಎನ್ನಲಾಗುತ್ತಿದೆ.