ತಿರುವನಂತಪುರಂ(ಕೇರಳ): ಸಂಕ್ರಾಂತಿ ದಿನವಾದ ಇಂದು ಲಂಕಾ ವಿರುದ್ಧದ ಏಕದಿನ ಕದನದಲ್ಲಿ ಆರಂಭಿಕ ಶುಭಮನ್ ಗಿಲ್ ಮತ್ತು ರನ್ ಮಷಿನ್ ವಿರಾಟ್ ಕೊಹ್ಲಿ ಶತಕ ಗಳಿಸಿದ್ದಾರೆ. ಇದು ಶುಭಮನ್ ಗಿಲ್ ಅವರ ವೈಯುಕ್ತಿಕ ಎರಡನೇ ಅಂತರಾಷ್ಟ್ರೀಯ ಏಕದಿನ ಶತಕವಾಗಿದೆ. ವಿರಾಟ್ ಕೊಹ್ಲಿ 46ನೇ ಏಕದಿನ ಹಾಗೂ ಎಲ್ಲಾ ಅಂತರಾಷ್ಟ್ರೀಯ ಪಂದ್ಯದಲ್ಲಿ 74ನೇ ಶತಕ ಗಳಿಸಿದಂತಾಗಿದೆ. ಕೊಹ್ಲಿ ಆಡಿದ ಕೊನೆಯ ನಾಲ್ಕು ಏಕದಿನ ಪಂದ್ಯದಲ್ಲಿ ಮೂರರಲ್ಲಿ ಶತಕ ದಾಖಲಿಸಿ, ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇಬ್ಬರ ಶತಕದ ನೆರವಿನಿಂದ ಲಂಕಾಗೆ ಭಾರತ 390 ರನ್ಗಳ ಬೃಹತ್ ಗುರಿಯನ್ನು ನೀಡಿದೆ.
ಲಂಕಾ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಶುಭಮನ್ ಗಿಲ್ ಮತ್ತು ಮಾಜಿ ನಾಯಕ ಕಿಂಗ್ ಕೊಹ್ಲಿ ಅವರ ಶತಕದಿಂದ ಭಾರತ 5 ವಿಕೆಟ್ ನಷ್ಟದಿಂದ 390 ರನ್ಗಳಿಸಿತು. ಲಂಕಾ ಬೌಲರ್ಗಳನ್ನು ಕಾಡಿದ ವಿರಾಟ್ 110 ಎಸೆತಗಳನ್ನು ಎದುರಿಸಿ 13 ಬೌಂಡರಿ ಮತ್ತು 8 ಸಿಕ್ಸರ್ಗಳಿಂದ 166ರನ್ಗಳಿಸಿ ಅಜೇಯರಾಗಿ ಉಳಿದರು. ಇದು ಲಂಕಾ ವಿರುದ್ಧದ 10ನೇ ಮತ್ತು ತವರು ನೆಲದಲ್ಲಿ 21ನೇ ಶತಕವಾಗಿದೆ.
ಆರಂಭಿಕರಾಗಿ ಗಿಲ್ ಮತ್ತು ನಾಯಕ ರೋಹಿತ್ ಶರ್ಮಾ ಮೊದಲ ಪಂದ್ಯದ ರೀತಿಯೇ ಜೊತೆಯಾಟ ಆರಂಭಿಸಿದರು. ರೋಹಿತ್ ಶರ್ಮಾ ಮತ್ತೆ ಹಿಟ್ ಮ್ಯಾನ್ನಂತೆ ಹೊಡಿಬಡಿ ಆಟಕ್ಕೆ ಮುಂದಾಗಿ ವಿಕೆಟ್ ಒಪ್ಪಿಸಿದರು. 49 ಎಸೆತ ಎದುರಿಸಿ ಹಿಟ್ ಮ್ಯಾನ್ 3 ಸಿಕ್ಸ್ ಮತ್ತು 2 ಬೌಂಡರಿಯಿಂದ 42 ರನ್ಗಳಿಸಿದ್ದಾಗ ಕರುಣರತ್ನೆ ಎಸೆತಕ್ಕೆ ವಿಕೆಟ್ ಒಪ್ಪಿಸಿದರು.
ನಂತರ ಬಂದ ವಿರಾಟ್ ಕೊಹ್ಲಿ ತಮ್ಮ ಫಾರ್ಮನ್ನು ಮುಂದುವರೆಸಿದರು. ಗಿಲ್ ಜೊತೆಗೂಡಿದ ಕೊಹ್ಲಿ 103 ರನ್ ಜೊತೆಯಾಟ ನೀಡಿದರು. 97 ಎಸೆತ 14 ಬೌಂಡರಿ ಮತ್ತು 2 ಸಿಕ್ಸರ್ನಿಂದ 116 ರನ್ಗಳಿಸಿ ಆಡುತ್ತಿದ್ದ ಗಿಲ್, ರಚಿತ್ಗೆ ಬೌಲ್ಡ್ ಆದರು. ಅವರ ಏಕದಿನ ಕ್ರಿಕೆಟ್ ಕೆರಿಯರ್ನ ಎರಡನೇ ಶತಕ ಇದಾಗಿತ್ತು. ನಂತರ ಬಂದ ಅಯ್ಯರ್ ಕೊಹ್ಲಿಗೆ ಹೆಚ್ಚಿನ ಕ್ರೀಸ್ ಬಿಟ್ಟುಕೊಟ್ಟರು. 32 ಎಸೆತದಲ್ಲಿ 38 ರನ್ಗಳಿಸಿ ಆಡುತ್ತಿದ್ದ ಶ್ರೇಯಸ್, ಲಹಿರು ಕುಮಾರ್ಗೆ ವಿಕೆಟ್ ಒಪ್ಪಿಸಿದರು. ನಂತರ ಕೆ ಎಲ್ ರಾಹುಲ್ (7) ಮತ್ತು ಸೂರ್ಯ ಕುಮಾರ್ ಯಾದವ್ (4) ಬೇಗ ಔಟ್ ಆದರು. ಅಕ್ಷರ್ 2 ರನ್ಗಳಿಸಿ ಅಜೇಯರಾಗಿ ಉಳಿದರು.
ಲಂಕಾ ಬೌಲರ್ಗಳನ್ನು ದಂಡಿಸಿದ ಬ್ಯಾಟರ್ಗಳು:ಲಂಕಾ ಪರ ಐವರು ಬೌಲರ್ಗಳು 50+ ರನ್ ಬಿಟ್ಟುಕೊಟ್ಟರು. ಅದರಲ್ಲಿ ಹತ್ತು ಓವರ್ ಮಾಡಿದ ರಜಿತ್ 81 ಮತ್ತು ಲಹಿರು ಕುಮಾರ್ 87 ರನ್ ಕೊಟ್ಟರು. ಇವರಿಬ್ಬರೂ ತಲಾ ಎರಡು ವಿಕೆಟ್ ಗಳಿಸಿದರು. ಕರುಣರತ್ನೆ 8 ಓವರ್ ಮಾಡಿ 1 ವಿಕೆಟ್ ಪಡೆದರು.
ಭಾರತ ಮತ್ತು ಲಂಕಾ ತಂಡದಲ್ಲಿ ಎರಡು ಬದಲಾವಣೆಗಳನ್ನು ಮಾಡಿಕೊಂಡಿತ್ತು. ಭಾರತದ ಆಲ್ರೌಂಡರ್ ಹಾರ್ದಿಕ್ ಬದಲಾಗಿ ವಾಷಿಂಗ್ಟನ್ ಸುಂದರ್ ಮತ್ತು ವೇಗಿ ಉಮ್ರಾನ್ ಮಲಿಕ್ ಬದಲಾಗಿ ಸೂರ್ಯಕುಮಾರ್ ಸೇರ್ಪಡೆಯಾಗಿದ್ದಾರೆ. ಲಂಕಾ ತಂಡದಲ್ಲಿ ಧನಂಜಯ್ ಡಿ ಸಿಲ್ವ ಬದಲಿಗೆ ಅಶೆನ್ ಬಂಡಾರ ಮತ್ತು ದುನಿತ್ ವೆಲ್ಲಲಾಗೆ ಜಾಗಕ್ಕೆ ಜೆಫ್ರಿ ವಾಂಡರ್ಸೆ ಬಂದಿದ್ದಾರೆ.
ಇದನ್ನೂ ಓದಿ:ಗಾಯದಿಂದ ರವೀಂದ್ರ ಜಡೇಜಾ ಚೇತರಿಕೆ; ಫಿಟ್ನೆಸ್ ಸಾಬೀತಿಗೆ ರಣಜಿಯಲ್ಲಿ ಕಣಕ್ಕೆ