ಲಂಡನ್:ಮಹಿಳೆಯರ ಟಿ20 ತ್ರಿಕೋನ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವು ದ.ಆಫ್ರಿಕಾವನ್ನು ಮಣಿಸುವ ಮೂಲಕ ಅಭಿಯಾನ ಆರಂಭಿಸಿದೆ. ಮುಂದಿನ ಪಂದ್ಯದಲ್ಲಿ ಭಾರತಕ್ಕೆ ವೆಸ್ಟ್ ಇಂಡೀಸ್ ಎದುರಾಳಿ. ಬರುವ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ಟಿ20 ವಿಶ್ವಕಪ್ ಕೂಡ ನಿಗದಿಯಾಗಿದೆ. ಇದಕ್ಕೂ ಮುನ್ನ ಭಾರತ ತ್ರಿಕೋನ ಸರಣಿಯಲ್ಲಿ ಭಾಗಿಯಾಗಿದೆ.
ಗುರುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 11.4 ಓವರ್‌ಗಳಲ್ಲಿ 69 ರನ್ ಗಳಿಸಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದು ಅಮನ್‌ಜೋತ್ ಕೌರ್. ಬ್ಯಾಟರ್ ಕೌರ್ ಅವರು ದ.ಆಫ್ರಿಕಾ ವಿರುದ್ಧದ ತಮ್ಮ ಪಾದಾರ್ಪಣೆ ಪಂದ್ಯದಲ್ಲೇ 30 ಎಸೆತಗಳಲ್ಲಿ 41 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಕಟ್ಟಿದರು.
7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದ ಕೌರ್ ಸಂಯಮದಿಂದ ಆಟವಾಡಿ ಭಾರತದ ಇನ್ನಿಂಗ್ಸ್ ಮುನ್ನಡೆಸಿದರು. ಯಾಸ್ತಿಕಾ ಭಾಟಿಯಾ 34 ರನ್ ಗಳಿಸಿದರು. ಕೌರ್ ಅವರ ಅದ್ಭುತ ಇನ್ನಿಂಗ್ಸ್ ಭಾರತದ ಸ್ಕೋರ್ ಅನ್ನು 6 ವಿಕೆಟ್‌ಗೆ 147ಕ್ಕೆ ತಲುಪಿಸಿತು. ದೀಪ್ತಿ ಶರ್ಮಾ 23 ಎಸೆತಗಳಲ್ಲಿ 33 ರನ್‌ಗಳ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅಂತಿಮವಾಗಿ ನಿಗದಿತ 20 ಓವರ್ಗಳಿಗೆ ಸ್ಮೃತಿ ಮಂಧಾನ ಟೀಂ 6 ವಿಕೆಟ್ ನಷ್ಟಕ್ಕೆ 147 ರನ್‌ಗಳ ಗಳಿಸಿ ಸಾಧಾರಣ ಗುರಿ ನೀಡಿತು. ಈ ಮೊತ್ತ ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ ನಾರಿಯರು 120 ರನ್ ಗಳಿಸಲಷ್ಟೇ ಶಕ್ತರಾದರು.
ದ.ಆಫ್ರಿಕಾ ಮಹಿಳಾ ತಂಡ ದೇವಿಕಾ-ದೀಪ್ತಿ ಎದುರು ದಿಟ್ಟತನ ತೋರಲು ಸಾಧ್ಯವಾಗಲಿಲ್ಲ. ಅಮೋಘ ಬ್ಯಾಟಿಂಗ್ ನಂತರ ದೀಪ್ತಿ ಶರ್ಮಾ ಬೌಲಿಂಗ್ನಲ್ಲೂ ಅದ್ಭುತ ಪ್ರದರ್ಶನ ನೀಡಿದರು. ಆಫ್ ಸ್ಪಿನ್ನರ್ ದೀಪ್ತಿ 4 ಓವರ್‌ಗಳಲ್ಲಿ 30 ರನ್ ನೀಡಿ 3 ವಿಕೆಟ್ ಕಿತ್ತರು. ಲೆಗ್ ಸ್ಪಿನ್ನರ್ ದೇವಿಕಾ ವೈಧ್ 3 ಓವರ್ ಗಳಲ್ಲಿ 19 ರನ್ ನೀಡಿ 2 ವಿಕೆಟ್ ಪಡೆದರು. ಭಾರತದ ಮುಂದಿನ ಪಂದ್ಯ ಜನವರಿ 23 ರಂದು ನಡೆಯಲಿದೆ. ಮೊದಲ ಪಂದ್ಯದಲ್ಲಿ ಅಮನ್‌ಜೋತ್ ಕೌರ್ ಅವರಂತಹ ಉತ್ತಮ ಬ್ಯಾಟರ್ ಸಿಕ್ಕಿದ್ದು, ಸ್ಮೃತಿ ಮಂಧಾನ ಬಳಗಕ್ಕೆ ಮತ್ತಷ್ಟು ಬಲ ತುಂಬಿದೆ.
ಇದನ್ನೂ ಓದಿ:ಆಗ ರಾಷ್ಟ್ರೀಯ ಮಟ್ಟದ ಹ್ಯಾಂಡ್‌ಬಾಲ್ ಆಟಗಾರ: ಈಗ ತರಕಾರಿ ಮಾರಿ ಜೀವನ ನಿರ್ವಹಣೆ