ಕೊಲಂಬೊ (ಶ್ರೀಲಂಕಾ): ಲೀಗ್ ಹಂತದಲ್ಲಿ ಪಾಕಿಸ್ತಾನ ಮತ್ತು ಭಾರತ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿ ಆದ ಕಾರಣ ಫಲಿತಾಂಶ ರಹಿತ ಮ್ಯಾಚ್ ಅದಾಗಿತ್ತು. ವಾರದ ಅಂತರದಲ್ಲಿ ಮತ್ತೆ ಸಾಂಪ್ರದಾಯಿಕ ಎದುರಾಳಿಗಳು ಮೈದಾನದಲ್ಲಿ ಮುಖಾಮುಖಿ ಆಗಿದ್ದು, ಇದಕ್ಕೂ ಮಳೆ ಕಾಡಿದೆ. ನಾಳೆ ಮೀಸಲು ದಿನ ಇರುವುದರಿಂದ ಚಿಂತೆ ಇಲ್ಲವಾದರೂ, ಸಾಧ್ಯವಾದಷ್ಟೂ ಇಂದೇ ಫಲಿತಾಂಶ ಕಾಣುವಂತೆ ಡಿಎಲ್ಎಸ್ ನಿಯಮದನ್ವಯ ಆಡಿಸಲಾಗುವುದು.
ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದ ಹಿನ್ನೆಲೆ ಮೈದಾನ ಸಂಪೂರ್ಣ ತೇವವಾಗಿದೆ. ಇದರಿಂದಾಗಿ ಮೈದಾನದಲ್ಲಿ ಪಂದ್ಯಾರಂಭಕ್ಕೆ ತಡವಾಗುವ ಸಾಧ್ಯತೆ ಇದೆ. ಪಂದ್ಯವನ್ನು ಇಂದು ರಾತ್ರಿ 10:30 ಒಳಗೆ ನಡೆಸಲು ಸಾಧ್ಯವಾದರೆ ಡಿಎಲ್ಎಸ್ ನಿಯಮದಂತೆ ಪಾಕಿಸ್ತಾನಕ್ಕೆ 20 ಓವರ್ ಆಡಿಸಲಾಗುವುದು. ಅದರಂತೆ ಪಾಕಿಸ್ತಾನ 180 ರನ್ ಗುರಿಯನ್ನು ಭೇದಿಸಬೇಕಿದೆ. 8 ಗಂಟೆ ವೇಳೆಗೆ ಅಂಪೈರ್ಗಳು ಮೈದಾನದ ತೇವಾಂಶವನ್ನು ಪರಿಶೀಲಿಸಲಿದ್ದು, ಈ ವೇಳೆ ಆಡಿಸಲು ಸಾಧ್ಯತೆಗಳಿದ್ದಲ್ಲಿ ಡಿಎಲ್ಎಸ್ ನಿಯಮ ಅನ್ವಯ ಆಗಲಿದೆ.
ಪಂದ್ಯ: ಆರಂಭಿಕ ಜೋಡಿ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಅವರ ಭರ್ಜರಿ ಆರಂಭವನ್ನು ಭಾರತ ಕಂಡಿತ್ತು. ಮಳೆ ಮಧ್ಯಪ್ರವೇಶಿಸುವ ವೇಳೆಗೆ ಭಾರತ 2 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು. ಆದಾಗ್ಯೂ, ತಂಡಗಳು ಡ್ರೆಸ್ಸಿಂಗ್ ರೂಮ್‌ಗೆ ಮರಳುವ ಮೊದಲು, ರೋಹಿತ್ ಮತ್ತು ಶುಬ್‌ಮನ್ 121 ರನ್‌ಗಳ ಪಾಲುದಾರಿಕೆಯಲ್ಲಿ ಪಾಕಿಸ್ತಾನದ ಬೌಲರ್‌ಗಳ ಮೇಲೆ ಪ್ರಹಾರ ನಡೆಸಿದ್ದರು.