ಕೊಲೊಂಬೊ (ಶ್ರೀಲಂಕಾ): ಏಷ್ಯಾಕಪ್‌ನ ಸೂಪರ್ ಫೋರ್ ಘಟ್ಟದ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಇಂದಿನ ಮೀಸಲು ದಿನಕ್ಕೆ ಶಿಫ್ಟ್ ಆಗಿದೆ. ಆದ್ರೆ ಈ ಪಂದ್ಯ ನಡೆಯುವ ಕೊಲಂಬೊ ನಗರಿಯಲ್ಲಿ ಮಳೆ ಸುರಿಯುವ ದಟ್ಟ ಕಾರ್ಮೋಡ ಕಂಡುಬಂದಿದೆ. ಹೀಗಾಗಿ, ಕ್ರಿಕೆಟ್ ಪ್ರೇಮಿಗಳಿಗೆ ಮತ್ತೆ ನಿರಾಶೆ ಕಾದಿದೆ.
ನಿನ್ನೆ ಪ್ರೇಮದಾಸ ಸ್ಟೇಡಿಯಂನಲ್ಲಿ ಪಂದ್ಯ ಶುರುವಾದಾಗ ಬಿಸಿಲು ಬೆಳಗುತ್ತಿತ್ತು. ಹವಾಮಾನ ಮಾಹಿತಿ ಒದಗಿಸುವ ವೆಬ್‌ಸೈಟ್‌ಗಳ ಭವಿಷ್ಯ ತಪ್ಪಾಯಿತು ಎಂದೇ ಅನೇಕರು ಭಾವಿಸಿದ್ದರು. ಆದರೆ, ಭಾರತೀಯ ಇನಿಂಗ್ಸ್‌ನ 25ನೇ ಓವರ್‌ನಲ್ಲಿ ಆರಂಭವಾದ ಮಳೆ, ಕೆಲ ಹೊತ್ತಿನಲ್ಲಿ ಧಾರಾಕಾರ ಸ್ವರೂಪ ಪಡೆಯಿತು. ಔಟ್‌ಫೀಲ್ಡ್ ಕೆಸರುಮಯವಾಯಿತು. ಮಳೆ ನಿಂತ ಬಳಿಕ ನೀರು ನಿಂತು ಇಡೀ ಮೈದಾನ ಒದ್ದೆಯಾಯಿತು. ಪಂದ್ಯ ಮುನ್ನಡೆಸಲು ಸಾಧ್ಯವೇ ಆಗಲಿಲ್ಲ. ಹೀಗಾಗಿ ಪಂದ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇಂದಿನ ಮೀಸಲು ದಿನಕ್ಕೆ ಮುಂದೂಡಲಾಯಿತು.
ಕೊಲಂಬೊ ಹವಾಮಾನ ವರದಿ: ಕೊಲಂಬೊದಲ್ಲಿ ಇಂದು ಶೇ 80ರಿಂದ 90ರಷ್ಟು ಮಳೆ ಸುರಿಯುವ ಸಾಧ್ಯತೆ ಇದೆ. weather.com ಶೇ 90 ರಷ್ಟು ಮಳೆಯಾಗುವ ಮುನ್ಸೂಚನೆ ನೀಡಿದೆ. ಸ್ಥಳೀಯ ಕಾಲಮಾನದ ಪ್ರಕಾರ, ಮಧ್ಯಾಹ್ನ 3 ಗಂಟೆಯ ಬಳಿಕ ಶೇ 70ರಷ್ಟು ಮಳೆ ಬೀಳುವ ಸಾಧ್ಯತೆ ಕಂಡುಬಂದಿದೆ. ಸಂಜೆ 5:30ರ ನಂತರ ಗರಿಷ್ಠ ಮಳೆಯಾಗಲಿದೆ ಎಂದು weather.com ಭವಿಷ್ಯ ನುಡಿದಿದೆ. ಭಾರತ ಮತ್ತು ಪಾಕಿಸ್ತಾನದ ಕೋಟ್ಯಂತರ ಕ್ರಿಕೆಟ್ ಅಭಿಮಾನಿಗಳಿಗೆ ಈ ಸುದ್ದಿ ನಿರಾಶೆ ಮೂಡಿಸಿದೆ.