ಅಹಮದಾಬಾದ್ (ಗುಜರಾತ್):ಟಿ20 ಸರಣಿ ಉಳಿವಿಗಾಗಿ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ಮತ್ತು ಭಾರತ ತಂಡ ನರೇಂದ್ರ ಮೋದಿ ಕ್ರಿಡಾಂಗಣದಲ್ಲಿಂದು ಸೆಣಸಾಟ ನಡೆಸುತ್ತಿವೆ. ಟಾಸ್ ಗೆದ್ದ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಆಯ್ದುಕೊಂಡಿದ್ದಾರೆ. ಎರಡೂ ತಂಡಗಳು ಒಬ್ಬೊಬ್ಬ ಆಟಗಾರರ ಬದಲಾವಣೆ ಮಾಡಿವೆ. ಚಹಾಲ್ ಜಾಗಕ್ಕೆ ಉಮ್ರಾನ್ ಮರಳಿದ್ದಾರೆ. ಪಿಚ್ ವೇಗಿಗಳಿಗೆ ನೆರವಾಗುವ ಸಾಧ್ಯತೆ ಇದ್ದು ಚಹಾಲ್ರನ್ನು ಕೈಬಿಡಲಾಗಿದೆ ಎಂದು ಹಾರ್ದಿಕ್ ಪಾಂಡ್ಯ ತಿಳಿಸಿದರು. ಕಿವೀಸ್ ತಂಡದಲ್ಲಿ ಜಾಕೋಬ್ ಡಫಿ ಅವರನ್ನು ಕೈಬಿಟ್ಟು ಬೆನ್ ಲಿಸ್ಟರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
1-1 ರಿಂದ ಸರಣಿ ಸಮಬಲವಾಗಿದ್ದು ಇತ್ತಂಡಕ್ಕೂ ಇದು ಮಹತ್ವದ ಪಂದ್ಯ. ತವರಿನಲ್ಲಿ ಸತತ 12 ಟಿ20 ಸರಣಿ ಗೆದ್ದಿರುವ ಮೆನ್ ಇನ್ ಬ್ಲೂ ಮತ್ತೊಂದು ಸೀರಿಸ್ ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ. ಇನ್ನೊಂದೆಡೆ, ಏಕದಿನ ಸರಣಿ ಸೋಲಿನ ಸೇಡು ತೀರಿಸಿಕೊಳ್ಳಲು ಬ್ಲಾಕ್ ಕ್ಯಾಪ್ಸ್ ಹವಣಿಸುತ್ತಿದೆ. ಭಾರತ ಆರಂಭಿಕ ವೈಫಲ್ಯ ಎದುರಿಸುತ್ತಿದ್ದು, ಕಿವೀಸ್ ಮಧ್ಯಮ ಕ್ರಮಾಂಕವನ್ನು ಸುಧಾರಿಸಿಕೊಳ್ಳಬೇಕಿದೆ.