ನವದೆಹಲಿ:ಟಿ-20 ಶ್ರೇಯಾಂಕದಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತವನ್ನು ಐದನೇ ಸ್ಥಾನದಲ್ಲಿರುವ ನ್ಯೂಜಿಲ್ಯಾಂಡ್ ಜನವರಿ 27 ರಂದು ಚುಕುಟು ಕ್ರಿಕೆಟ್ನಲ್ಲಿ ಎದುರಿಸಲಿದೆ. ಏಕದಿನ ಸರಣಿಯಲ್ಲಿ ವೈಟ್ವಾಶ್ ಆದ ಕಿವೀಸ್ ಟಿ20ಯಲ್ಲಿ ಪುಟಿದೇಳುವ ಭರವಸೆಯಲ್ಲಿದೆ. ಮೂರು ಪಂದ್ಯಗಳ ಟಿ20 ಸರಣಿಗೆ ಹಾರ್ದಿಕ್ ನಾಯಕತ್ವ ಇರಲಿದೆ.
ಈ ಟೂರ್ನಿಯ ಮೊದಲ ಪಂದ್ಯ ಜನವರಿ 27ರಂದು ರಾಂಚಿಯ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇಲ್ಲಿ ಭಾರತ ತಂಡದ ದಾಖಲೆ ಉತ್ತಮವಾಗಿದೆ. ಜೆಎಸ್‌ಸಿಎ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೆ ಒಂದೇ ಒಂದು ಟಿ-20 ಪಂದ್ಯವನ್ನು ಸೋತಿಲ್ಲ. ಅಷ್ಟೇ ಅಲ್ಲ ಇಲ್ಲಿ ನಡೆದ ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ಜಯ ಸಾಧಿಸಿತ್ತು. ಜನವರಿ 27 ರಂದು ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ರಾಂಚಿಯಲ್ಲಿ ಟೀ ಇಂಡಿಯಾ ಮೈದಾನಕ್ಕಿಳಿಯಲಿದೆ. ಈ ಸರಣಿಯ ಎರಡನೇ ಪಂದ್ಯ ಜನವರಿ 29 ರಂದು ಲಕ್ನೋದಲ್ಲಿ ಮತ್ತು ಮೂರನೇ ಟಿ20 ಪಂದ್ಯ ಅಹಮದಾಬಾದ್‌ನಲ್ಲಿ ಫೆಬ್ರವರಿ 1 ರಂದು ನಡೆಯಲಿದೆ.
ರಾಂಚಿಯಲ್ಲಿ ಉತ್ತಮ ರೆಕಾರ್ಡ್:ರಾಂಚಿಯ ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಭಾರತ ಟಿ20 ಪಂದ್ಯಗಳ ದಾಖಲೆ ಉತ್ತಮವಾಗಿದೆ. ಇಲ್ಲಿಯವರೆಗೂ ಇಲ್ಲಿ ಟೀಂ ಇಂಡಿಯಾ ಒಂದೇ ಒಂದು ಟಿ20 ಪಂದ್ಯವನ್ನು ಸೋತಿಲ್ಲ. ಬ್ಲೂ ಬಾಯ್ಸ್ ಆಡಿದ 3 ಪಂದ್ಯಗಳಲ್ಲಿ ಎಲ್ಲವೂ ಗೆಲುವಾಗಿದೆ. ಭಾರತ 2016 ಫೆಬ್ರವರಿಯಲ್ಲಿ ಶ್ರೀಲಂಕಾವನ್ನು 69 ರನ್‌ಗಳಿಂದ, 2017 ಅಕ್ಟೋಬರ್‌ನಲ್ಲಿ ಆಸ್ಟ್ರೇಲಿಯಾವನ್ನು 9 ವಿಕೆಟ್‌ಗಳಿಂದ ಮತ್ತು 2021ರಲ್ಲಿ ನ್ಯೂಜಿಲ್ಯಾಂಡ್ ಅನ್ನು 7 ವಿಕೆಟ್‌ಗಳಿಂದ ಸೋಲಿಸಿತ್ತು.
2021ರ ಕಿವೀಸ್ ವಿರುದ್ಧದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಜಿಲ್ಯಾಂಡ್ 153 ರನ್ ಗಳಿಸಿತ್ತು. ಭಾರತ 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಟೀಂ ಇಂಡಿಯಾ ಪರ ನಾಯಕ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅರ್ಧಶತಕ ಸಿಡಿಸಿದ್ದರು. ರೋಹಿತ್ 36 ಎಸೆತಗಳಲ್ಲಿ 55 ರನ್ ಗಳಿಸಿದ್ದರು.
ಕ್ರಿಡಾಂಗಣದ ಸುತ್ತ ಭದ್ರತೆ:ಗಣರಾಜ್ಯೋತ್ಸವದ ಮಾರನೇ ದಿನ ನಡೆಯಲಿರುವ ಪಂದ್ಯಕ್ಕೆ ಪೊಲೀಸರು ಇಂದಿನಿಂದಲೇ ತಯಾರಿ ಮಾಡಿಕೊಂಡಿದ್ದಾರೆ.ಕ್ರಿಡಾಂಗಣದ ಒಳಗೆ ಮತ್ತು ಹೊರಗೆ ಪೊಲೀಸ್ ಭದ್ರತೆ ಮಾಡಲಾಗಿದೆ. ವಿಮಾನ ನಿಲ್ದಾಣದಿಂದ ಹೋಟೆಲ್‌ವರೆಗೆ ಮತ್ತು ಹೋಟೆಲ್‌ನಿಂದ ಜೆಎಸ್‌ಸಿಎ ಕ್ರೀಡಾಂಗಣದವರೆಗೆ ಪೊಲೀಸ್ ಅಧಿಕಾರಿಗಳು ಭದ್ರತೆಗೆ ನಿಯೋಜಿಸಿದ್ದಾರೆ.