ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೊದಲ ಸರಣಿಯಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಬುಧವಾರ ಮುಖಾಮುಖಿಯಾಗುತ್ತಿವೆ. ಈ ಟೆಸ್ಟ್ ಸರಣಿಯಲ್ಲಿ ನಾಯಕ ವಿರಾಟ್ ಕೊಹ್ಲಿ, ಅಶ್ವಿನ್ ಸೇರಿದಂತೆ ಹಲವು ಕ್ರಿಕೆಟಿಗರು ನೂತನ ಮೈಲಿಗಲ್ಲು ಸ್ಥಾಪಿಸಿಲಿದ್ದಾರೆ.
ಭಾರತ ತಂಡ ಕಳೆದ ಬಾರಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಸಂದರ್ಭದಲ್ಲಿ ಕೊಹ್ಲಿ ಪಡೆ 1-4 ರ ಅಂತರದಲ್ಲಿ ಸರಣಿ ಕಳೆದುಕೊಂಡಿತ್ತು. ಆದರೆ, ಅದ್ಭುತ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ನಾಯಕ ಕೊಹ್ಲಿ 5 ಪಂದ್ಯಗಳಿಂದ 2 ಶತಕ ಮತ್ತು 3 ಅರ್ಧಶತಕಗಳ ಸಹಿತ 593 ರನ್ಗಳಿಸಿದ್ದರು. ಇದೀಗ ಮತ್ತೊಮ್ಮೆ ಇಂಗ್ಲೆಂಡ್ ಪ್ರವಾಸ ಕೈಗೊಳ್ಳುತ್ತಿದ್ದು, ಈ ಬಾರಿ ಕೂಡ ಕೆಲವು ಮೈಲಿಗಲ್ಲುಗಳನ್ನು ಸಾಧಿಸುವ ಹಾದಿಯಲ್ಲಿದ್ದಾರೆ.
ರಿಕಿ ಪಾಂಟಿಂಗ್ ಹಿಂದಿಕ್ಕಲು ಬೇಕು 1 ಶತಕ
ವಿರಾಟ್ ಕೊಹ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 70 ಶತಕ ಬಾರಿಸಿದ್ದು, ಇನ್ನೊಂದು ಶತಕ ಬಾರಿಸಿದರೆ, ವಿಶ್ವದಲ್ಲಿ ಗರಿಷ್ಠ ಶತಕ ಬಾರಿಸಿದ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ಹಿಂದಿಕ್ಕಿ 2ನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿ 2019ರಲ್ಲಿ ಬಾಂಗ್ಲಾದೇಶದ ವಿರುದ್ಧ ತಮ್ಮ ಕೊನೆಯ ಶತಕ ದಾಖಲಿಸಿದ್ದಾರೆ. ಸಚಿನ್ ತೆಂಡೂಲ್ಕರ್ 100 ಶತಕ ಬಾರಿಸಿ ಗರಿಷ್ಠ ಶತಕದ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.
ಟೆಸ್ಟ್ನಲ್ಲಿ 8000 ರನ್
ಪ್ರಸ್ತುತ ವಿರಾಟ್ ಕೊಹ್ಲಿ 92 ಟೆಸ್ಟ್ ಪಂದ್ಯಗಳಿಂದ 7,547 ರನ್ಗಳಿಸಿದ್ದಾರೆ. ಇದೀಗ 5 ಪಂದ್ಯಗಳ ಸರಣಿಯಲ್ಲಿ ಕೊಹ್ಲಿ 453 ರನ್ಗಳಿಸಿದರೆ ದೀರ್ಘ ಮಾದರಿಯ ಕ್ರಿಕೆಟ್ನಲ್ಲಿ 8 ಸಾವಿರ ಮೈಲಿಗಲ್ಲನ್ನು ತಲುಪಲಿದ್ದಾರೆ. ಈ ಮೂಲಕ ಭಾರತದ ಪರ ಈ ಸಾಧನೆ ಮಾಡಿದ 6ನೇ ಬ್ಯಾಟ್ಸ್ಮನ್ ಎನಿಸಿಕೊಳ್ಳಲಿದ್ದಾರೆ.
ಇಂಗ್ಲೆಂಡ್ ವಿರುದ್ಧ ಗರಿಷ್ಠ ರನ್
ಕೊಹ್ಲಿ ಪ್ರಸ್ತುತ ಇಂಗ್ಲೆಂಡ್ ವಿರುದ್ಧ 23 ಟೆಸ್ಟ್ ಗಳಲ್ಲಿ 1,742 ರನ್ ಗಳಿಸಿದ್ದು, ಮುಂದಿನ 5 ಟೆಸ್ಟ್ ಪಂದ್ಯಗಳಲ್ಲಿ 258 ರನ್ ಗಳನ್ನು ಗಳಿಸಿದರೆ ಆಂಗ್ಲರ ವಿರುದ್ಧ ಗರಿಷ್ಠ ರನ್ ಮತ್ತು 2000 ರನ್ ಪೂರೈಸಿದ ಏಕೈಕ ಭಾರತೀಯ ಎನಿಸಿಕೊಳ್ಳಲಿದ್ದಾರೆ. ಕನ್ನಡಿಗ ರಾಹುಲ್ ದ್ರಾವಿಡ್ ಇಂಗ್ಲೆಂಡ್ ವಿರುದ್ಧ 1950 ರನ್ ರನ್ಗಳಸಿದ್ದಾರೆ.
ಇಂಗ್ಲೆಂಡ್ ವಿರುದ್ಧ ಗರಿಷ್ಠ ಶತಕ
ಕೇವಲ ರನ್ಗಳಷ್ಟೇ ಅಲ್ಲದೆ ಇಂಗ್ಲೆಂಡ್ ವಿರುದ್ಧ 10 ಇನ್ನಿಂಗ್ಸ್ಗಳಲ್ಲಿ 2 ಶತಕ ಸಿಡಿಸಿದರೆ ಸಚಿನ್ ಮತ್ತು ದ್ರಾವಿಡ್ ದಾಖಲೆಯನ್ನು ಸರಿಗಟ್ಟಲಿದ್ದಾರೆ. ದಿಗ್ಗಜರಾದ ಸಚಿನ್ ಮತ್ತು ದ್ರಾವಿಡ್ ಇಂಗ್ಲೆಂಡ್ ವಿರುದ್ಧ ತಲಾ ಏಳು ಶತಕಗಳನ್ನು ಸಿಡಿಸಿದ್ದಾರೆ. ಕೊಹ್ಲಿ ಐದು ಈಗಾಗಲೇ 5 ಶತಕಗಳನ್ನು ಸಿಡಿಸಿದ್ದು, ಸರಣಿಯಲ್ಲಿ 3 ಶತಕ ಬಾರಿಸಿದರೆ ಮಹತ್ವದ ದಾಖಲೆ ಕೊಹ್ಲಿ ಪಾಲಾಗಲಿದೆ.
ಇದನ್ನು ಓದಿ:ಗಾಯದ ಮೇಲೆ ಬರೆ.. ಮೊದಲ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಕನ್ನಡಿಗ ಮಯಾಂಕ್ ಅಗರವಾಲ್