ಹೈದರಾಬಾದ್: 2023ರ ಏಕದಿನ ವಿಶ್ವಕಪ್ ಬೆನ್ನಲ್ಲೇ ಭಾರತ ಆಸ್ಟ್ರೇಲಿಯಾದ ಜೊತೆಗೆ 5 ಟಿ20 ಪಂದ್ಯಗಳ ಸರಣಿಯನ್ನು ಆಡುತ್ತಿದೆ. ಇದಕ್ಕೆ ಬಿಸಿಸಿಐ ಸೂರ್ಯಕುಮಾರ್ ಯಾದವ್ ನೇತೃತ್ವದಲ್ಲಿ ತಂಡವನ್ನು ಪ್ರಕಟಿಸಿದೆ. ಐರ್ಲೆಂಡ್ ವಿರುದ್ಧ ಭಾರತ ಜಸ್ಪ್ರೀತ್ ಬುಮ್ರಾ ನಾಯಕತ್ವದ ಅಡಿ ಆಡಿತ್ತು. ಹೆಚ್ಚು ಕಡಿಮೆ ಇದೇ ತಂಡ ಮುಂದುವರಿಸಲಾಗಿದೆ. ಆದರೆ, ಅದರಲ್ಲಿದ್ದ ಅನುಭವಿ ಆಟಗಾರ ಸಂಜು ಸ್ಯಾಮ್ಸನ್ ಅವರನ್ನು ಕೈಬಿಡಲಾಗಿದೆ. 3 ಪಂದ್ಯಗಳಿಗೆ ರುತುರಾಜ್ ಗಾಯಕ್ವಾಡ್ ಹಾಗೇ ಕೊನೆಯ ಎರಡು ಪಂದ್ಯಗಳಿಗೆ ಶ್ರೇಯಸ್ ಅಯ್ಯರ್ ಉಪನಾಯಕ ಆಗಿರಲಿದ್ದಾರೆ.
ಬಿಸಿಸಿಐ ತಂಡ ಪ್ರಕಟಿಸಿದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್ನಲ್ಲಿ ಸಂಜು ಸ್ಯಾಮ್ಸನ್ ಹ್ಯಾಷ್ಟ್ಯಾಗ್ ಮುನ್ನೆಲೆಗೆ ಬಂತು. ಆಸ್ಟ್ರೆಲಿಯಾ ವಿರುದ್ಧದ ತವರಿನ ಸರಣಿಗೆ ಸಂಜು ಅವರನ್ನು ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆಗಳು ಬಂದವು. ಏಷ್ಯಾಕಪ್ ಮತ್ತು ವಿಶ್ವಕಪ್ ಮುನ್ನ ನಡೆದ ಐರ್ಲೆಂಡ್ ಸರಣಿಗೆ ಸಂಜು ಆಯ್ಕೆ ಆಗಿದ್ದರು. ಇದರಿಂದ ಮುಂದಿನ ಪ್ರಮುಖ ತಂಡದಲ್ಲಿ ಸ್ಥಾನಸಿಗುವ ನಿರೀಕ್ಷೆ ಇತ್ತು.
ಸಂಜು ಸ್ಯಾಮ್ಸನ್ ಅವರನ್ನು ಏಷ್ಯಾಕಪ್‌ಗಾಗಿ ತಂಡದಲ್ಲಿ ಸೇರಿಸಲಾಗಿಲ್ಲ ಅಥವಾ ವಿಶ್ವಕಪ್‌ಗೆ ಮುನ್ನ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಅವರನ್ನು ಸೇರಿಸಿಕೊಳ್ಳಲಾಗಿಲ್ಲ. ಇದೀಗ ವಿಶ್ವಕಪ್ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲೂ ಸ್ಥಾನ ಪಡೆದಿಲ್ಲ. ಸಂಜು ಸ್ಯಾಮ್ಸನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಐಪಿಎಲ್‌ನಲ್ಲಿ ಫೈನಲ್ ತಲುಪಿತ್ತು. ಅಲ್ಲದೇ ಅವರ ಐಪಿಎಲ್ ಅಂಕಿ- ಅಂಶಗಳು ಸಹ ಉತ್ತಮವಾಗಿವೆ. ಐರ್ಲೆಂಡ್ನಲ್ಲಿ ಸಿಕ್ಕ ಒಂದು ಅವಕಾಶದಲ್ಲಿ 26 ಬಾಲ್ನಲ್ಲಿ 40 ರನ್ ಗಳಿಸಿ ಸಾಬೀತು ಮಾಡಿಕೊಂಡಿದ್ದರು.