ಇಂದೋರ್ (ಮಧ್ಯಪ್ರದೇಶ): ವಿಶ್ವಕಪ್ ತಯಾರಿಯ ಹಿನ್ನೆಲೆಯಲ್ಲಿ ಆಯೋಜಿಸಲಾಗಿರುವ ಮೂರು ಏಕದಿನ ಪಂದ್ಯಗಳ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಭಾರತ ಮೊದಲ ಪಂದ್ಯವನ್ನು ಗೆದ್ದು ಸಿರೀಸ್ನಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ನಾಳೆ ಇಲ್ಲಿನ ಹೋಳ್ಕರ್ ಮೈದಾನದಲ್ಲಿ ಎರಡನೇ ಏಕದಿನ ಪಂದ್ಯವನ್ನು ರಾಹುಲ್ ನಾಯಕತ್ವದ ತಂಡ ಆಡಲಿದೆ. ಸರಣಿ ಸಮಬಲ ಸಾಧಿಸಲು ಆಸಿಸ್ ಚಿಂತಿಸುತ್ತಿದ್ದರೆ, ರಾಹುಲ್ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ.
ವಿಶ್ವಕಪ್ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಮತ್ತು ಕುಲ್ದೀಪ್ ಯಾದವ್ಗೆ ವಿಶ್ರಾಂತಿ ನೀಡಲಾಗಿದೆ. ಅಲ್ಲದೇ ಏಷ್ಯಾಕಪ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸಿರಾಜ್ ತಂಡದಲ್ಲಿದ್ದರೂ, ವಿಶ್ವಕಪ್ ಕಾರಣಕ್ಕೆ ರೆಸ್ಟ್ ಕೊಡಲಾಗಿದೆ. ಇವರೆಲ್ಲರ ಹೊರತಾಗಿಯೂ ಭಾರತ ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಗೆದ್ದು, ನಂ.1 ಪಟ್ಟವನ್ನು ಅಲಂಕರಿಸಿದೆ.
ಮೊದಲ ಪಂದ್ಯದಲ್ಲಿ ರನ್ ಔಟ್ ಆಗಿ ಬ್ಯಾಟಿಂಗ್ನಲ್ಲಿ ವಿಫಲರಾದ ಶ್ರೇಯಸ್ ಅಯ್ಯರ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ವಿಶ್ವಕಪ್ ತಂಡಕ್ಕೆ ಆಯ್ಕೆ ಆಗಿರುವ ಕಾರಣ ಅವರು ಆಸಿಸ್ ವಿರುದ್ಧ ತಮ್ಮ ಫಾರ್ಮ್ನ್ನು ಕಂಡುಕೊಳ್ಳುವುದು ಬಹಳಾ ಮುಖ್ಯವಾಗುತ್ತದೆ. ಏಷ್ಯಾಕಪ್ನಲ್ಲಿ ಒಂದು ಪಂದ್ಯದಲ್ಲಿ ಅವಕಾಶ ಸಿಕ್ಕಿತ್ತು, ಆದರೆ ನಂತರ ಮತ್ತೆ ಬೆನ್ನು ನೋವಿಗೆ ತುತ್ತಾದ ಅಯ್ಯರ್ಗೆ ಆಡುವ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ನಾಳಿನ ಪಂದ್ಯದಲ್ಲಿ ಅವರು ಉತ್ತಮ ಪ್ರದರ್ಶನ ನೀಡಲೇಬೇಕು. ಮೂರನೇ ಪಂದ್ಯಕ್ಕೆ ವಿರಾಟ್, ರೋಹಿತ್, ಹಾರ್ದಿಕ್ ತಂಡಕ್ಕೆ ಮರಳುವುದರಿಂದ ಮಧ್ಯಮ ಕ್ರಮಾಂಕದಲ್ಲಿ ಅಯ್ಯರ್ ಕೈ ಬಿಡಲೇಬೇಕಾಗುತ್ತದೆ.
21 ತಿಂಗಳ ನಂತರ ಏಕದಿನ ತಂಡಕ್ಕೆ ಮರಳಿರುವ ಅಶ್ವಿನ್ ಸಹ ಆಲ್ರೌಂಡರ್ ಪ್ರದರ್ಶನ ನೀಡುವ ಅಗತ್ಯ ಇದೆ. ಅಕ್ಷರ್ ಪಟೇಲ್ ಗಾಯಗೊಂಡಿರುವುದರಿಂದ ಅಶ್ವಿನ್ಗೆ 11ರ ಬಳಗದಲ್ಲಿ ಅವಕಾಶ ಸಿಕ್ಕಿದೆ. ಇಲ್ಲವಾದಲ್ಲಿ 15ರ ಒಳಗೂ ಅವರು ಬರುವುದು ಅನುಮಾನವೇ ಇತ್ತು. ಮೂರನೇ ಪಂದ್ಯಕ್ಕೂ ಮುನ್ನ ಮಿಂಚಿನ ಪ್ರದರ್ಶನ ನೀಡಬೇಕಿದೆ. ಅಕ್ಷರ್ ಚೇತರಿಸಿಕೊಂಡಲ್ಲಿ, ಮೂರನೇ ಪಂದ್ಯಕ್ಕೆ ಮರಳಲಿದ್ದಾರೆ. ಅಲ್ಲದೇ ಮೂರನೇ ಪಂದ್ಯಕ್ಕೆ ಕುಲ್ದೀಪ್ ತಂಡಕ್ಕೆ ಸೇರುವುದರಿಂದ ಅಶ್ವಿನ್ ಅವಕಾಶ ಕಳೆದುಕೊಳ್ಳುವುದಂತೂ ಖಚಿತ.
ಏಕದಿನ ಪಂದ್ಯದಲ್ಲಿ ವಿಫಲತೆ ಕಾಣುತ್ತಿದ್ದ ಸೂರ್ಯಕುಮಾರ್ ಯಾದವ್ ಮೊದಲ ಏಕದಿನದಲ್ಲಿ ಅರ್ಧಶತಕದ ಆಟ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಇನ್ನು ಎಲ್ಲಾ ಸ್ಥಾನಗಳಿಗೂ ಇಶಾನ್ ಕಿಶನ್ ಫಿಟ್ ಆಗುತ್ತಿದ್ದಾರೆ. ರಾಹುಲ್ ತಮ್ಮ ಹಳೆ ಫಾರ್ಮ್ಗೆ ಮರಳಿದ್ದಾರೆ. ಹೀಗಾಗಿ ಭಾರತ ತಂಡ ನಾಳೆಯೂ ಗೆಲ್ಲುವ ಫೇವ್ರೇಟ್ ಟೀಮ್ ಆಗಿ ಕಂಡುಬರುತ್ತಿದೆ.