ರಾಜ್ ಕೋಟ್ (ಗುಜರಾತ್): ಭಾರತದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯನ್ ಬ್ಯಾಟರ್ಗಳು ಕಳೆದೆರಡು ಪಂದ್ಯಕ್ಕಿಂತ ಉತ್ತಮವಾಗಿ ರನ್ ಕಲೆಹಾಕಿದ್ದಾರೆ. ಮೊದಲ ನಾಲ್ಕು ಬ್ಯಾಟರ್ಗಳ ಅರ್ಧಶತಕದ ನೆರವಿನಿಂದ ಆಸ್ಟ್ರೇಲಿಯಾ ನಿಗದಿತ ಓವರ್ ಅಂತ್ಯಕ್ಕೆ 7ವಿಕೆಟ್ ನಷ್ಟಕ್ಕೆ 352 ರನ್ ಕಲೆಹಾಕಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ವಿಶ್ರಾಂತಿ ಪಡೆದು ಭಾರತ ತಂಡಕ್ಕೆ ಅನುಭವಿ ಬ್ಯಾಟರ್ಗಳಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಮರಳಿದ್ದು, ಆಸಿಸ್ ನೀಡಿದ 353 ರನ್ನ ಬೃಹತ್ ಮೊತ್ತವನ್ನು ಸಾಧಿಸಬೇಕಿದೆ.
ಆಸಿಸ್ಗೆ ಉತ್ತಮ ಆರಂಭ:ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಪ್ಯಾಟ್ ಕಮಿನ್ಸ್ ನಿರ್ಧಾರವನ್ನು ಆಸಿಸ್ ಆಟಗಾರರು ಸಮರ್ಥಿಸಿಕೊಂಡಿದ್ದಾರೆ. ಮೂವರು ವೇಗಿಗಳ ಜೊತೆ ಇಂದು ರೋಹಿತ್ ಪಡೆ ಮೈದಾನಕ್ಕಿಳಿದಿದ್ದು, ನೀರೀಕ್ಷಿತ ಯಶಸ್ಸು ಮೊದಲು ಕಾಣಲಿಲ್ಲ. ಆರಂಭಿಕ ಬ್ಯಾಟರ್ಗಳಾದ ಮಿಚೆಲ್ ಮಾರ್ಷ್ ಮತ್ತು ಡೇವಿಡ್ ವಾರ್ನರ್ ಜೋಡಿ 78 ರನ್ನ ಜೊತೆಯಾಟವನ್ನು ಮಾಡಿತು. ಅನುಭವಿ ವಾರ್ನರ್ ಭಾರತದ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲೂ ಅರ್ಧಶತಕ ಗಳಿಸಿ ತಮ್ಮ ಫಾರ್ಮ್ನ್ನು ಪ್ರದರ್ಶಿಸಿದ್ದಾರೆ.
ವಾರ್ನರ್ ತಮ್ಮ ಎಂದಿನ ಶೈಲಿಯಲ್ಲಿ ಬ್ಯಾಟಿಂಗ್ ಮಾಡಿದರು. ಲೆಗ್ ಸೈಡ್ ಬಾಲ್ಗಳನ್ನು ಲೀಲಾಜಾಲವಾಗಿ ಬೌಂಡರಿಗೆ ಕಳಿಸುತ್ತಾ 32 ಎಸೆತದಲ್ಲಿ 6 ಫೋರ್ ಮತ್ತು 4 ಸಿಕ್ಸ್ನಿಂದ 54 ರನ್ ಕಲೆಹಾಕಿದರು. ನಂತರ ಮೈದಾನಕ್ಕೆ ಬಂದ ಸ್ಟೀವ್ ಸ್ಮಿತ್ ಇನ್ನೊಬ್ಬ ಆರಂಭಿಕ ಆಟಗಾರ ಮಾರ್ಷ್ ಜೊತೆಗೆ ಪಾಲುದಾರಿಕೆಯನ್ನು ಮುಂದುವರೆಸಿದರು.
ಸ್ಮಿತ್ - ಮಾರ್ಷ ಶತಕದ ಜೊತೆಯಾಟ:ಎರಡನೇ ವಿಕೆಟ್ಗೆ ಈ ಜೋಡಿ 137 ರನ್ ಪಾಲುದಾರಿಕೆಯನ್ನು ಮಾಡಿತು. ವಾರ್ನರ್ ವಿಕೆಟ್ ನಂತರ ಮಾರ್ಷ್ ರನ್ನ ವೇಗವನ್ನು ಹೆಚ್ಚಿಸಿದರು. ಭಾರತೀಯ ಬೌಲರ್ಗಳನ್ನು ದಂಡಿಸಲು ಆರಂಭಿಸಿದರು. ಪವರ್ ಪ್ಲೇ ನಂತರ ಸ್ಪಿನ್ಗಳ ಮೂಲಕ ರೋಹಿತ್ ಶರ್ಮಾ ನಿಯಂತ್ರಣ ಸಾಧಿಸಲು ಪ್ರಯತ್ನಸಿದರೂ ಮಾರ್ಷ ತಮ್ಮ ರನ್ ಗಳಿಕೆ ಶೈಲಿಯನ್ನು ಬದಲಾಯಿಸಲಿಲ್ಲ. ಮಾರ್ಷ ಶತಕಕ್ಕೆ 4 ರನ್ ಬೇಕಿದ್ದಾಗ ವಿಕೆಟ್ ಕೊಟ್ಟರು. ಇದರಿಂದ ಅಂತಾರಾಷ್ಟ್ರೀಯ ಏಕದಿನದ 4ನೇ ಶತಕದಿಂದ ವಂಚಿತರಾದರು. ಇನ್ನಿಂಗ್ಸ್ನಲ್ಲಿ ಮಾರ್ಷ್ 84 ಬಾಲ್ ಆಡಿ 13 ಬೌಂಡರಿ ಮತ್ತು 3 ಸಿಕ್ಸ್ನಿಂದ 96 ರನ್ ಕಲೆಹಾಕಿದರು.