ನವದೆಹಲಿ:ಮೊದಲ ಟೆಸ್ಟ್ ಹೀನಾಯ ಸೋಲಿನ ಬಳಿಕ ಸ್ಪಿನ್ ಪಿಚ್ ಬಗ್ಗೆ ಚಕಾರ ಎತ್ತಿದ್ದ ಆಸ್ಟ್ರೇಲಿಯಾ, ವೇಗಿಗಳಿಗೆ ನೆರವಾಗುವ ಮೈದಾನದಲ್ಲೂ ಇಂದು ಕಳಪೆ ಆಟ ಮುಂದುವರಿಸಿತು. ಇದರ ಪರಿಣಾಮ ಎದುರಿಸಿದ ಪ್ರವಾಸಿಗರು 2ನೇ ಟೆಸ್ಟ್ ಪಂದ್ಯವನ್ನೂ ಕಳೆದುಕೊಂಡರು. ಜಡೇಜಾ, ಆರ್.ಅಶ್ವಿನ್, ಶಮಿ ಹಾಗು ಅಕ್ಷರ್ ಪಟೇಲ್ ನೆರವಿನಿಂದ ಭಾರತ ಎರಡನೇ ಟೆಸ್ಟ್ ಪಂದ್ಯವನ್ನು ಗೆದ್ದು ಬೀಗಿತು.
ದ್ವಿತೀಯ ಟೆಸ್ಟ್ನ 2ನೇ ಇನಿಂಗ್ಸ್ನಲ್ಲಿ ಕೇವಲ 113 ರನ್ಗೆ ಸರ್ವಪತನ ಕಂಡಿತು. ರವೀಂದ್ರ ಜಡೇಜಾ ಮತ್ತು ಆರ್.ಅಶ್ವಿನ್ರ ಮಾರಕ ಸ್ಪಿನ್ ದಾಳಿಗೆ ತರಗೆಲೆಯಂತೆ ಉದುರಿದ ಆಸೀಸ್ ಬ್ಯಾಟರ್ಗಳು ದಿನದಾಟದ ಮೊದಲ ಅವಧಿಯ 2 ಗಂಟೆಯಲ್ಲೇ ಆಟ ಮುಕ್ತಾಯ ಮಾಡಿದರು.
3ನೇ ದಿನಕ್ಕೆ ವಿಕೆಟ್ ಕಾಯ್ದುಕೊಂಡಿದ್ದ ಟ್ರೇವಿಸ್ ಹೆಡ್(39) ಹೆಚ್ಚುವರಿ 4 ರನ್ ಗಳಿಸಿದಾಗ ಅಶ್ವಿನ್ ಎಸೆತಕ್ಕೆ ಬಲಿಯಾದರು. 16 ಗಳಿಸಿದ್ದ ಮಾರ್ನಸ್ ಲಬುಶೇನ್ ತುಸು ಹೋರಾಟ ನಡೆಸಿದರು. 35 ರನ್ ಗಳಿಸಿದ್ದಾಗ ರವೀಂದ್ರ ಜಡೇಜಾ ಬೌಲ್ಡ್ ಮಾಡಿದರು. ಇದಾದ ಬಳಿಕ ಆಸೀಸ್ ಬ್ಯಾಟರ್ಗಳು ಸತತವಾಗಿ ಪೆವಿಲಿಯನ್ ಪರೇಡ್ ನಡೆಸಿದರು.
ಒಂದಂಕಿ ದಾಟದ 8 ಬ್ಯಾಟರ್ಗಳು:ಲಬುಶೇನ್ ಮತ್ತು ಹೆಡ್ ಸೇರಿ 78 ರನ್ ಗಳಿಸಿದರೆ, ಉಳಿದ 8 ಬ್ಯಾಟರ್ಗಳು 38 ರನ್ ಮಾಡಿದರು. ಅದರಲ್ಲಿ ಮೂವರು 0 ಸುತ್ತಿದರೆ, 5 ಜನ ಒಂದಂಕಿಗೆ ಸುಸ್ತಾದರು. ಒಂದು ಹಂತದಲ್ಲಿ 3 ವಿಕೆಟ್ಗೆ 85 ರನ್ ಗಳಿಸಿದ್ದ ಕಾಂಗರೂ ಪಡೆ ಉಳಿದ 28 ರನ್ಗೆ 7 ವಿಕೆಟ್ ಕಳೆದುಕೊಂಡು ಸರ್ವಪತನ ಕಂಡಿತು.