ಇಂದೋರ್ (ಮಧ್ಯಪ್ರದೇಶ):ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಬ್ಯಾಟರ್ಗಳು ಘರ್ಜಿಸಿದ್ದಾರೆ. ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಶತಕ ಗಳಿಸಿದರೆ, ನಾಯಕ ಕೆಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಅರ್ಧಶತಕ ಗಳಿಸಿದರು. ನಾಲ್ವರ ಭರ್ಜರಿ ಬ್ಯಾಟಿಂಗ್ ಬಲದಿಂದ ಭಾರತ ನಿಗದಿತ ಓವರ್ ಅಂತ್ಯಕ್ಕೆ 5 ವಿಕೆಟ್ ನಷ್ಟಕ್ಕೆ 399 ರನ್ ಕಲೆಹಾಕಿದೆ. ಸರಣಿಯನ್ನು ಜೀವಂತ ಉಳಿಸಿಕೊಳ್ಳಲು ಕಾಂಗರೂ ಪಡೆ 400 ರನ್ ಗಳಿಸುವ ಅವಶ್ಯಕತೆ ಇದೆ.
ಎರಡನೇ ಪಂದ್ಯದ ಟಾಸ್ ಗೆದ್ದ ಆಸ್ಟ್ರೇಲಿಯಾ ಫಿಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದ ಮೊದಲು ಬ್ಯಾಟಿಂಗ್ಗೆ ಬಂದ ಭಾರತಕ್ಕೆ ಜೋಶ್ ಹ್ಯಾಜಲ್ವುಡ್ ಆರಂಭಿಕ ಆಘಾತ ನೀಡಿದರು. ಮೊದಲ ಪಂದ್ಯದಲ್ಲಿ 71 ರನ್ನ ಅದ್ಭುತ ಇನ್ನಿಂಗ್ಸ್ ಆಡಿದ್ದ ರುತುರಾಜ್ ಗಾಯಕ್ವಾಡ್ ಇಂದು 8 ರನ್ಗೆ ವಿಕೆಟ್ ಕೊಟ್ಟರು. ಆದರೆ ಎರಡನೇ ವಿಕೆಟ್ಗೆ ಒಂದಾದ ಗಿಲ್ ಮತ್ತು ಅಯ್ಯರ್ ವಿಕೆಟ್ ನಷ್ಟವಾದರೂ ರನ್ ವೇಗವನ್ನು ಕುಸಿಯದಂತೆ ಜೊತೆಯಾಟ ಆಡಿದರು.
ಇಂದೋರ್ನ ಹೋಳ್ಕರ್ ಮೈದಾನವನ್ನು ಬ್ಯಾಟರ್ಗಳ ಸ್ವರ್ಗ ಎಂದು ಕರೆಯಲಾಗುತ್ತದೆ. ಅದರಂತೆ ಭಾರತೀಯ ಬ್ಯಾಟರ್ಗಳು ಬೌಂಡರಿ ಸಿಕ್ಸರ್ಗಳ ಮೂಲಕ ರನ್ ಹೊಳೆಯೇ ಹರಿಸಿದರೆ, ಆಸಿಸ್ ಬೌಲರ್ಗಳಿ ವಿಕೆಟ್ ಪಡೆಯಲು ಮತ್ತು ರನ್ಗೆ ಕಡಿವಾಣ ಹಾಕಲು ಹೆಣಗಾಡ ಬೇಕಾಯಿತು. ಗಿಲ್ ಮತ್ತು ಅಯ್ಯರ್ ಬ್ಯಾಟಿಂಗ್ ವಿಶ್ವಕಪ್ಗೂ ಮುನ್ನ ಭಾರತದ ಬ್ಯಾಟಿಂಗ್ ಬಗ್ಗೆ ಇದ್ದ ಗೊಂದಲವನ್ನು ಪರಿಹರಿಸಿತು. ಅಯ್ಯರ್ ಕಮ್ಬ್ಯಾಕ್ ಇದ್ದ ಪ್ರಶ್ನೆಗಳಿಗೆ ಬಹುತೇಕ ಉತ್ತರ ಸಿಕ್ಕಿದೆ.
200 ರನ್ನ ಜೊತೆಯಾಟ: ಅಯ್ಯರ್ ಮತ್ತು ಗಿಲ್ ಜೋಡಿ ಎರಡನೇ ವಿಕೆಟ್ಗೆ ದ್ವಿಶತಕದ ಜೊತೆಯಾಟ ಮಾಡಿದರು. ಅಯ್ಯರ್ 90 ಬಾಲ್ನಲ್ಲಿ 11 ಬೌಂಡರಿ ಮತ್ತು 3 ಸಿಕ್ಸ್ನಿಂದ 105 ರನ್ ಗಳಿಸಿದರು. ಇದು ಅವರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ನ 3ನೇ ಶತಕವಾಗಿದೆ. ಇನ್ನು ಗಿಲ್ 97 ಬಾಲ್ ಆಡಿ 6 ಬೌಂಡರಿ ಮತ್ತು 4 ಸಿಕ್ಸ್ನಿಂದ 104 ರನ್ ಗಳಿಸಿ ವಿಕೆಟ್ ಕೊಟ್ಟರು. ಗಿಲ್ ಈ ವರ್ಷದ 5ನೇ ಶತಕವನ್ನು ದಾಖಲಿಸಿದರು.