ಮುಂಬೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಐದು ವಿಕೆಟ್‌ಗಳಿಂದ ಆಸ್ಟ್ರೇಲಿಯಾವನ್ನು ಸೋಲಿಸಿದೆ. ಆಸ್ಟ್ರೇಲಿಯಾ ನೀಡಿದ 188 ರನ್‌ಗಳ ಗುರಿಯನ್ನು ಭಾರತ 39.5 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟದಲ್ಲಿ 191 ರನ್ ಗಳಿಸಿ ಸಾಧಿಸಿತು. ಈ ಕಡಿಮೆ ಸ್ಕೋರಿಂಗ್ ಪಂದ್ಯದಲ್ಲಿ ಒಮ್ಮೆ ಭಾರತದ ಸ್ಥಿತಿ ಸಂಕಷ್ಟದಲ್ಲಿತ್ತು. ಭಾರತ ಕೇವಲ 39 ರನ್ ಗಳಿಸುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿತ್ತು. ಆದರೆ ಭಾರತಕ್ಕೆ ಈ ಪಂದ್ಯದಲ್ಲಿ ಕೆಎಲ್ ರಾಹುಲ್ ಆಸರೆಯಾದರು. ರಾಹುಲ್ ಅರ್ಧಶತಕ ಬಾರಿಸಿ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ಜಯ ತಂದುಕೊಟ್ಟರು.
ಟೀಕಾಕಾರರಿಗೆ ಬ್ಯಾಟ್ ಮೂಲಕ ಉತ್ತರಿಸಿದ ರಾಹುಲ್:ಭಾರತದ ಸ್ಟೈಲಿಶ್ ಬಲಗೈ ಬ್ಯಾಟರ್, ವಿಕೆಟ್ ಕೀಪರ್ ಕೆಎಲ್ ರಾಹುಲ್ 91 ಎಸೆತಗಳನ್ನು ಎದುರಿಸಿ ಅಜೇಯರಾಗಿ 75 ರನ್ ಗಳಿಸಿ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ನಿನ್ನೆ ಆಡಿದರು. ಈ ಇನ್ನಿಂಗ್ಸ್‌ನಲ್ಲಿ ಅವರು 7 ಬೌಂಡರಿ ಮತ್ತು 1 ಸಿಕ್ಸರ್ ಗಳಿಸಿದರು. ರಾಹುಲ್ ತಮ್ಮ ಇನ್ನಿಂಗ್ಸ್‌ನಿಂದ ಭಾರತಕ್ಕೆ ಪಂದ್ಯವನ್ನು ಗೆಲ್ಲಿಸಿದ್ದಲ್ಲದೇ, ತಮ್ಮ ಟೀಕಾಕಾರರಿಗೆ ಬ್ಯಾಟ್‌ನಿಂದ ತಕ್ಕ ಉತ್ತರವನ್ನೂ ನೀಡಿದರು. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಟೆಸ್ಟ್‌ಗಳ ಸರಣಿಯಲ್ಲಿ ಕೆಎಲ್ ರಾಹುಲ್ ಭಾರತೀಯ ತಂಡದ ಭಾಗವಾಗಿದ್ದರು.
ನಾಗ್ಪುರ ಟೆಸ್ಟ್ ಮತ್ತು ದೆಹಲಿ ಟೆಸ್ಟ್ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅದರ ನಂತರ ಅನೇಕ ಅನುಭವಿಗಳು ಮತ್ತು ಹಿರಿಯ ಆಟಗಾರರು ರಾಹುಲ್ ಬ್ಯಾಟಿಂಗ್ ಬಗ್ಗೆ ಟೀಕೆಗಳನ್ನು ಮಾಡಲು ಆರಂಭಿಸಿದರು. ರಾಹುಲ್ಗೆ ತಂಡದಲ್ಲಿ ಮತ್ತೆ ಮತ್ತೆ ಸ್ಥಾನ ಕೊಡಲಾಗುತ್ತಿದೆ ಎಂಡು ಟೀಕೆಗಳು ಬಂದಿದ್ದವು. ಎರಡನೇ ಟೆಸ್ಟ್ ನಂತರ ರಾಹುಲ್ ಅವರನ್ನು ಉಪನಾಯಕನ ಸ್ಥಾನವನ್ನು ಕಳೆದುಕೊಂಡಿದ್ದರು.