ಬೆಂಗಳೂರು:ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ತಲಾ ಒಂದೊಂದು ಪಂದ್ಯ ಗೆದ್ದು ಸಮಬಲ ಸಾಧಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಇಂದು ಬೆಂಗಳೂರಿನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಚಿನ್ನಸ್ವಾಮಿ ಮೈದಾನದಲ್ಲಿ ಉಭಯ ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿದ್ದು, ಯಾವ ತಂಡಕ್ಕೆ ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬ ಕುತೂಹಲ ಕ್ರೀಡಾಭಿಮಾನಿಗಳಲ್ಲಿ ಮನೆ ಮಾಡಿದೆ.
ಜನವರಿ 14ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಬೌಲರ್ಗಳ ಅಬ್ಬರಕ್ಕೆ ಭಾರತದ ಆಟಗಾರರಲ್ಲಿ ಶಿಖರ್ ಧವನ್ ಹೊರತುಪಡಿಸಿ ಉಳಿದವರು ಉತ್ತಮ ಪ್ರದರ್ಶನ ತೋರುವಲ್ಲಿ ವಿಫಲರಾದರು. ಬೌಲಿಂಗ್ ವಿಭಾಗದೊಂದಿಗೆ ಬ್ಯಾಟಿಂಗ್ನಲ್ಲೂ ಆಸ್ಟ್ರೇಲಿಯಾ ಉತ್ತಮ ನಿರ್ವಹಣೆ ತೋರಿತ್ತು. ಆದ್ರೆ ಆಸ್ಟ್ರೇಲಿಯಾ ಒಂದೂ ವಿಕೆಟ್ ಕಳೆದುಕೊಳ್ಳದೆ ಡೇವಿಡ್ ವಾರ್ನರ್ ಹಾಗೂ ಆ್ಯರೋನ್ ಫಿಂಚ್ ಬಾರಿಸಿದ ಶತಕಗಳ ನೆರವಿನಿಂದ ಭಾರತ ನೀಡಿದ್ದ 255 ರನ್ಗಳ ಗುರಿಯನ್ನು ಸುಲಭವಾಗಿ ಮುಟ್ಟಿತ್ತು.
ಇದನ್ನೂ ಓದಿ...ಕೇವಲ 4 ರನ್ಗಳಿಸಿದರೆ ಸಚಿನ್, ಗಂಗೂಲಿ, ಲಾರಾ ದಾಖಲೆ ಮುರಿಯಲಿದ್ದಾರೆ ಹಿಟ್ಮ್ಯಾನ್...
ಜನವರಿ 17ರಂದು ರಾಜ್ಕೋಟ್ನಲ್ಲಿ ನಡೆದ 2ನೇ ಪಂದ್ಯದಲ್ಲಿ ಭಾರತದ ಬ್ಯಾಟ್ಸ್ಮನ್ಗಳು ದಿಟ್ಟತನ ಪ್ರದರ್ಶಿಸಿದ್ದರು. ಈ ಪಂದ್ಯದಲ್ಲಿ ಧವನ್ ಮತ್ತೆ ಮಿಂಚಿದರು. ಜೊತೆಗೆ ನಾಯಕ ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಕೂಡ ಅರ್ಧಶತಕ ಬಾರಿಸಿ ಬೃಹತ್ ಮೊತ್ತ ಕಲೆ ಹಾಕಿದ್ದರು. ಈ ಪಂದ್ಯದಲ್ಲಿ ಭಾರತ 36ರನ್ಗಳ ಗೆಲುವು ದಾಖಲಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿತು. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಲಗೊಂಡಿದೆ.
ಚೇಸಿಂಗ್ ಫೇವರೀಟ್?
ಇದೀಗ ಸರಣಿಗಾಗಿ ಅಂತಿಮ ಪಂದ್ಯದಲ್ಲಿ ಕಾದಾಟ ನಡೆಸಲು ಎರಡೂ ತಂಡಗಳು ಸಜ್ಜುಗೊಂಡಿವೆ. ಬ್ಯಾಟ್ಸ್ಮನ್ಗಳಿಗೆ ಹೆಚ್ಚು ಅನುಕೂಲವಾಗುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆಯೇ ಹರಿಯುವ ಸಾಧ್ಯತೆ ಇದೆ. ಅಲ್ಲದೆ, ಇಲ್ಲಿ ಚೇಸಿಂಗ್ ಮಾಡಿರುವ ತಂಡಗಳೇ ಹೆಚ್ಚು ಗೆದ್ದಿರುವುದು ವಿಶೇಷ. ಚೇಸಿಂಗ್ ಮಾಡುವ ತಂಡವೇ ಗೆಲ್ಲುವ ಸಾಧ್ಯತೆಯಿದೆ. ಆದ ಕಾರಣ ಟಾಸ್ ಗೆದ್ದ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ಳುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಕೊಂಚ ಮೋಡ ಮುಚ್ಚಿದ ವಾತಾವರಣವಿದೆ.