ಫ್ಲೋರಿಡಾ:ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿಯಲ್ಲಿ ಮೊದಲೆರಡು ಪಂದ್ಯ ಸೋತು ಟೀಕೆಗೆ ಗುರಿಯಾಗಿದ್ದ ಭಾರತ ಕ್ರಿಕೆಟ್ ಯುವಪಡೆ 3, 4ನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ 2-2 ರಲ್ಲಿ ಸಮಬಲ ಸಾಧಿಸಿತು. ನಿನ್ನೆ ರಾತ್ರಿ ನಡೆದ 4ನೇ ಟಿ20 ಪಂದ್ಯವನ್ನು ಭಾರತ 9 ವಿಕೆಟ್ಗಳಿಂದ ಜಯಿಸಿತು. ಇಂದು ನಡೆಯುವ 5ನೇ, ಕೊನೆಯ ಪಂದ್ಯ ಸರಣಿ ನಿರ್ಧರಿಸಲಿದೆ.
ಆರಂಭಿಕ ಯುವಜೋಡಿ ಶುಭಮನ್ಗಿಲ್, ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ನಿಂದಾಗಿ ವೆಸ್ಟ್ ಇಂಡೀಸ್ ಆಟ ಸಂಪೂರ್ಣ ನೆಲಕಚ್ಚಿತು. ಇಬ್ಬರೂ ಮೊದಲ ವಿಕೆಟ್ಗೆ 165 ರನ್ ಜೊತೆಯಾಟ ನೀಡುವ ಮೂಲಕ ಸರಾಗ ಗೆಲುವು ಭಾರತಕ್ಕೆ ಒಲಿಯುವಂತೆ ಮಾಡಿದರು.
ಟಾಸ್ ಗೆದ್ದ ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ 8 ವಿಕೆಟ್ಗೆ 178 ರನ್ ಗಳಿಸಿತು. ಇದಕ್ಕುತ್ತರವಾಗಿ ಭಾರತ 17 ಓವರ್ಗಳಲ್ಲಿ 179 ರನ್ ಗಳಿಸಿ ಗೆಲುವಿನ ಸಂಭ್ರಮಾಚರಣೆ ನಡೆಸಿತು. ಇಂದು ರಾತ್ರಿ ಸರಣಿಯ ಕ್ಲೈಮ್ಯಾಕ್ಸ್ ಹಣಾಹಣಿ ನಡೆಯಲಿದೆ.
ಯುವಜೋಡಿಯ 'ರನ್'ಬರಹ:ಭಾರತ ತಂಡದ ಹೊಸ ಆರಂಭಿಕ ಜೋಡಿಯಾದ ಶುಭ್ಮನ್ ಗಿಲ್, ಯಶಸ್ವಿ ಜೈಸ್ವಾಲ್ ತಲಾ ಅರ್ಧಶತಕ ಬಾರಿಸುವ ಮೂಲಕ ವೆಸ್ಟ್ ಇಂಡೀಸ್ ಬೌಲಿಂಗ್ ಪಡೆಯನ್ನು ಧೂಳೀಪಟ ಮಾಡಿತು. ಏಕಮೇವವಾಗಿ ಬ್ಯಾಟ್ ಬೀಸಿದ ಯುವಜೋಡಿ ಭಾರತದ ಪರ ಜಂಟಿ 2ನೇ ಅತ್ಯಧಿಕ ರನ್ ಜೊತೆಯಾಟ ನೀಡಿತು. ವೆಸ್ಟ್ ಇಂಡೀಸ್ ನೀಡಿದ್ದ 178 ರನ್ಗಳ ಮೊತ್ತಕ್ಕೆ ಆರಂಭದಿಂದಲೂ ಸರಾಗವಾಗಿ ಬ್ಯಾಟ್ ಮಾಡುತ್ತಲೇ ಉತ್ತರ ನೀಡಿತು.
6 ಓವರ್ಗಳ ಪವರ್ಪ್ಲೇನಲ್ಲಿ 66 ರನ್ ಗಳಿಸಿದ ಗಿಲ್, ಯಶಸ್ವಿ ಟಿ20ಯ ಚಾಣಾಕ್ಷ ಬ್ಯಾಟರ್ ಎಂಬುದನ್ನು ತೋರಿಸಿದರು. ಬಳಿಕ ರನ್ ಸೇರಿಸುತ್ತಲೇ ಸಾಗಿದ ಜೋಡಿ 15.3 ಓವರ್ಗಳಲ್ಲಿ 165 ರನ್ ಗಳಿಸಿದಾಗ ಗಿಲ್ ಭರ್ಜರಿ ಹೊಡೆತಕ್ಕೆ ಕೈ ಹಾಕಿ ಔಟಾದರು. ಅದಾಗಲೇ ಗಿಲ್ 47 ಎಸೆತಗಳಲ್ಲಿ 5 ಸಿಕ್ಸರ್, 3 ಬೌಂಡರಿ ಸಮೇತ 77 ರನ್ ಗಳಿಸಿದ್ದರು.
'ಯಶಸ್ವಿ' ಬ್ಯಾಟಿಂಗ್;ಐಪಿಎಲ್ನಲ್ಲಿ ಮಿಂಚು ಹರಿಸಿ ರಾಷ್ಟ್ರೀಯ ತಂಡ ಸೇರಿರುವ ಯಶಸ್ವಿ ಜೈಸ್ವಾಲ್ ಮೊದಲ ಅಂತಾರಾಷ್ಟ್ರೀಯ ಅರ್ಧಶತಕ ಬಾರಿಸಿ ಸಂಭ್ರಮಿಸಿದರು. ಆರಂಭದಿಂದಲೂ ವೇಗವಾಗಿ ರನ್ ಕಲೆಹಾಕಿದ ಆಟಗಾರ 51 ಎಸೆತಗಳಲ್ಲಿ 11 ಬೌಂಡರಿ, 3 ಸಿಕ್ಸರ್ ನೆರವಿನಿಂದ ಅಜೇಯ 84 ರನ್ ಮಾಡಿದರು.
ಹೋಪ್, ಹೆಟ್ಮೆಯರ್ ನೆರವು:ಇದಕ್ಕೂ ಮೊದಲು ಬ್ಯಾಟ್ ಮಾಡಿದ್ದ ವೆಸ್ಟ್ ಇಂಡೀಸ್ಗೆ ಸಿಮ್ರಾನ್ ಹೆಟ್ಮೆಯರ್ ಬಿರುಸಿನ (61) ಅರ್ಧಶತಕ, ಶಾಯ್ ಹೋಪ್ 45 ರನ್ ಗಳಿಸಿ ತಂಡ ಉತ್ತಮ ರನ್ ಗಳಿಸುವಂತೆ ಮಾಡಿದರು. ಮೊದಲೆರಡು ಪಂದ್ಯಗಳಲ್ಲಿ ಅಬ್ಬರಿಸಿದ್ದ ನಿಕೋಲಸ್ ಪೂರನ್ ವಿಫಲವಾದರು. ಕೈಲ್ ಮೇಯರ್ಸ್ 17, ಬ್ರೆಂಡನ್ ಕಿಂಗ್ 16, ಕೊನೆಯಲ್ಲಿ ಓಡಿಯನ್ ಸ್ಮಿತ್ 15 ರನ್ ಮಾಡಿದರು. ಭಾರತದ ಪರವಾಗಿ ಅರ್ಷದೀಪ್ ಸಿಂಗ್ 3, ಕುಲದೀಪ್ ಯಾದವ್ 2 ವಿಕೆಟ್ ಗಳಿಸಿದರು.
ಇಂದು ಕ್ಲೈಮ್ಯಾಕ್ಸ್ ಪಂದ್ಯ:ಸರಣಿಯ ಕೊನೆಯ ಮತ್ತು 5ನೇ ಪಂದ್ಯ ಇಂದು ರಾತ್ರಿ ನಡೆಯಲಿದೆ. 2-2 ರಲ್ಲಿ ಸಮಬಲಗೊಂಡಿರುವ ಸರಣಿ ವಶಕ್ಕೆ ಉಭಯ ತಂಡಗಳು ಸೆಣಸಾಡಲಿವೆ. ಫ್ಲೋರಿಡಾದ ಸೆಂಟ್ರಲ್ ಬ್ರೋವರ್ಡ್ ರೀಜನಲ್ ಪಾರ್ಕ್ ಸ್ಟೇಡಿಯಂ ಟರ್ಫ್ ಗ್ರೌಂಡ್ನಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ:Asian Champions Trophy: ಭಲೇ ಭಾರತ.. 4-3 ಗೋಲುಗಳಿಂದ ಮಲೇಷ್ಯಾ ಮಣಿಸಿದ ಇಂಡಿಯಾ.. ನಾಲ್ಕನೇ ಬಾರಿಗೆ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆಲುವು