ಲಂಡನ್: ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡಲು ಸಿದ್ಧರಾಗಿದ್ದು, ತಂಡವು ಗೆಲುವಿಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಸಮಯದಲ್ಲಿ, ಆಸ್ಟ್ರೇಲಿಯಾದ ವೇಗದ ಬೌಲಿಂಗ್ ದಾಳಿ ಇಂಗ್ಲೆಂಡ್‌ನ ಪರಿಸ್ಥಿತಿಗಳಲ್ಲಿ ಆರಂಭಿಕರಿಗೆ ಕಠಿಣ ಸವಾಲನ್ನು ನೀಡಬಹುದು ಎಂದು ರೋಹಿತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡ್ಯೂಕ್ ಬಾಲ್‌ನೊಂದಿಗೆ ಆಸ್ಟ್ರೇಲಿಯಾದ ಬೌಲಿಂಗ್ ಅನ್ನು ಬಲಿಷ್ಠ ಎಂದು ಪರಿಗಣಿಸಲಾಗಿದೆ. ಅದೇ ಸಮಯದಲ್ಲಿ, ಓವಲ್‌ನಲ್ಲಿ ಆಡಲು ಸಿದ್ಧವಾಗಿರುವ ರೋಹಿತ್ ಪಡೆ ಪ್ರತಿ ಕಠಿಣ ಸವಾಲನ್ನು ಎದುರಿಸಲು ಸಿದ್ಧರಿರುವುದಾಗಿ ಹೇಳಿಕೊಂಡಿದ್ದಾರೆ. ಎದುರಾಳಿ ನಾಯಕ ಪ್ಯಾಟ್ ಕಮ್ಮಿನ್ಸ್, ನ್ಯೂಜಿಲ್ಯಾಂಡ್ ಬ್ಯಾಟ್ಸ್‌ಮನ್ ರಾಸ್ ಟೇಲರ್ ಮತ್ತು ಇಂಗ್ಲೆಂಡ್‌ನ ಇಯಾನ್ ಬೆಲ್ ಅವರೊಂದಿಗಿನ ಪಂದ್ಯದ ಪೂರ್ವ ನಡೆಸಿದ ಮಾತುಕತೆಯಲ್ಲಿ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
"ಇಂಗ್ಲೆಂಡ್‌ನಲ್ಲಿನ ಹವಾಮಾನವು ಬ್ಯಾಟ್ಸ್‌ಮನ್‌ಗಳಿಗೆ ತುಂಬಾ ಸವಾಲಿನ ಸ್ಥಿತಿಯಾಗಿದೆ. ಆದರೆ, ನಾವು ಚೆನ್ನಾಗಿ ಸಿದ್ಧತೆ ಮಾಡಿಕೊಂಡಾಗ ಮಾತ್ರ ಸ್ವಲ್ಪ ಮಟ್ಟಿಗೆ ಯಶಸ್ಸು ಪಡೆಯಬಹುದು. ಇಲ್ಲಿನ ಪಿಚ್ಗಳು ಹೊಸ ಶೈನ್ ಬಾಲ್ನಲ್ಲಿ ವೇಗಿಗೆ ಸಹಕಾರಿಯಾಗುವಂತೆ ವರ್ತಿಸುತ್ತದೆ ಎಂದು ರೋಹಿತ್ಶರ್ಮಾ ಪಿಚ್ ಬಗ್ಗೆ ಅನುಭವವನ್ನು ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್‌ನಲ್ಲಿ ಬ್ಯಾಟಿಂಗ್ ಆರಂಭಿಕರಾಗಿ ಕಣಕ್ಕಿಳಿಯುವುದು ಎಂದಿಗೂ ಸುಲಭದ ಕೆಲಸವಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಆರಂಭಿಕರ ಸರಾಸರಿ ಉತ್ತಮವಾಗಿಲ್ಲ. ಚಾಂಪಿಯನ್ಶಿಪ್ನಲ್ಲಿ ಇಂಗ್ಲೆಂಡ್ ಮೈದಾನಗಳಲ್ಲಿ ಆಡಿದ 11 ಪಂದ್ಯದಲ್ಲಿ ಆಡಿರುವ ಆರಂಭಿಕರು ಕೇವಲ 28.06 ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಂದ ಕೇವಲ ಎರಡು ಶತಕಗಳು ಲಂಡನ್ನ ಮೈದಾನಗಳಲ್ಲಿ ದಾಖಲಾಗಿವೆ. ಎರಡೂ ಶತಕಗಳು ಭಾರತೀಯ ಬ್ಯಾಟರ್ಗಳು ಗಳಿಸಿದ್ದಾರೆ. ಕೆಎಲ್ ರಾಹುಲ್ 2021 ರಲ್ಲಿ ಲಾರ್ಡ್ಸ್‌ನಲ್ಲಿ 129 ರನ್ ಮತ್ತು ರೋಹಿತ್ ಶರ್ಮಾ ಓವಲ್‌ನಲ್ಲಿ 127 ರನ್ ಗಳಿಸಿದ್ದಾರೆ. ನಾಳೆಯಿಂದ ಇದೇ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯಲಿದೆ.