ಬೆಂಗಳೂರು:ಎರಡನೇ ಸೂಪರ್ ಓವರ್ ಹಣಾಹಣಿಯಲ್ಲಿ ರೋಚಕ ಜಯ ಸಾಧಿಸಿದ ಭಾರತ ತಂಡ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿತು. 213 ರನ್‌ಗಳ ಬೃಹತ್ ಮೊತ್ತದ ಗುರಿ ನಡುವೆಯೂ ಅಮೋಘ ಪ್ರದರ್ಶನ ತೋರಿದ ಅಫ್ಘನ್ನರು ಪಂದ್ಯವನ್ನು ಟೈ ಮಾಡುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಮೊದಲ ಸೂಪರ್ ಓವರ್ ಫೈಟ್ ಕೂಡ ಟೈ ಆಗಿದ್ದು, ಎರಡನೇ ಸೂಪರ್ ಓವರ್ ಹೋರಾಟದಲ್ಲಿ ಭಾರತ 10 ರನ್ ಜಯಭೇರಿ ಬಾರಿಸಿತು.
213 ರನ್ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ಉತ್ತಮ ಆರಂಭ ಪಡೆಯಿತು. ರಹಮತುಲ್ಲಾ ಗುರ್ಬಾಜ್ (50) ಹಾಗೂ ನಾಯಕ ಇಬ್ರಾಹಿಂ ಜದ್ರಾನ್ (50) ತಲಾ ಅರ್ಧಶತಕ ಬಾರಿಸಿ 11 ಓವರ್ಗಳಲ್ಲಿ 93 ರನ್‌ಗಳೊಂದಿಗೆ ಭದ್ರ ಬುನಾದಿ ಹಾಕಿಕೊಟ್ಟರು. ಗುರ್ಬಾಜ್ ವಿಕೆಟ್ ಪತನದ ಬಳಿಕ ಕ್ರೀಸ್ಗಿಳಿದ ಗುಲ್ಬದ್ದಿನ್ ನೇಬ್ (55) ಅಜೇಯ ಆಟವಾಡುವ ಮೂಲಕ ಟೈ ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು.
ನಾಯಕ ಇಬ್ರಾಹಿಂ 50 ರನ್‌ಗೆ ಔಟಾಗಿದ್ದು, ಬಳಿಕ ಬಂದ ಅಜ್ಮತುಲ್ಲಾ ಓಮರ್ಜೈ ಶೂನ್ಯಕ್ಕೆ ಮರಳಿದರು. ತದನಂತರ ಅನುಭವಿ ಬ್ಯಾಟರ್ ಮೊಹಮದ್ ನಬಿ ಹಾಗೂ ಗುಲ್ಬದ್ದಿನ್ ಆಕ್ರಮಣಕಾರಿ ಆಟದ ಮೂಲಕ ಪಂದ್ಯದ ರೋಚಕತೆ ಹೆಚ್ಚಿಸಿದರು. 16 ಎಸೆತಗಳಲ್ಲಿ 34 ರನ್ ಸಿಡಿಸಿ ನಬಿ ಔಟಾದರು. ಆದರೆ, ಇನ್ನೊಂದೆಡೆ ಹೋರಾಟ ಮುಂದುವರೆಸಿದ ಗುಲ್ಬದ್ದಿನ್ ಪಂದ್ಯವನ್ನು ಟೈ ಮಾಡುವಲ್ಲಿ ಯಶ ಕಂಡರು. 20ನೇ ಓವರ್ನಲ್ಲಿ ಅಫ್ಘನ್ ಗೆಲುವಿಗೆ 19 ರನ್ ಅಗತ್ಯವಿತ್ತು. ನಿರ್ಣಾಯಕ ಓವರ್ ಎಸೆದ ಮುಕೇಶ್ 18 ರನ್ ಬಿಟ್ಟುಕೊಟ್ಟಿದ್ದರಿಂದ ಪಂದ್ಯ ಟೈ ಆಗಿತ್ತು.
ಮೊದಲ ಸೂಪರ್ ಓವರ್:ಬಳಿಕ ಸೂಪರ್ ಓವರ್ನಲ್ಲೂ ಭಾರತಕ್ಕೆ ಪೈಪೋಟಿ ನೀಡಿದ ಅಫ್ಘಾನಿಸ್ತಾನ 16 ರನ್ ಬಾರಿಸಿತು. ಮುಕೇಶ್ ಬೌಲಿಂಗ್ನಲ್ಲಿ ಮೊದಲ ಎಸೆತದಲ್ಲೇ ಗುಲ್ಬದ್ದಿನ್ 1 ರನ್‌ಗೆ ರನೌಟ್ ಆದರು. ಬಳಿಕ ಗುರ್ಬಾಜ್ ಒಂದು ಬೌಂಡರಿಯೊಂದಿಗೆ 5 ರನ್ ಹಾಗೂ ನಬಿ ಸಿಕ್ಸರ್ ಸಹಿತ 10 ರನ್ ಸಿಡಿಸಿದರು. 17 ರನ್ ಗುರಿ ಬೆನ್ನಟ್ಟಿದ ಭಾರತಕ್ಕೆ ನಾಯಕ ರೋಹಿತ್ ಶರ್ಮಾ ಎರಡು ಸಿಕ್ಸರ್ ಚಚ್ಚುವ ಮೂಲಕ ಗೆಲುವಿನ ಸಮೀಪಕ್ಕೆ ತಂದರು. 6ನೇ ಎಸೆತದಲ್ಲಿ 2 ರನ್ ಬೇಕಿದ್ದಾಗ, ಯುವ ಬ್ಯಾಟರ್ ಜೈಸ್ವಾಲ್ ಒಂದೇ ರನ್ ಗಳಿಸಿದ್ದರಿಂದ ಪಂದ್ಯ ಮತ್ತೆ ಟೈ ಆಯಿತು.