ಮುಂಬೈ (ಮಹಾರಾಷ್ಟ್ರ):ತವರಿನಲ್ಲಿ ನಡೆಯುವ ಶ್ರೀಲಂಕಾ ವಿರುದ್ಧ ಟಿ20, ಏಕದಿನ ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ನಿರೀಕ್ಷೆಯಂತೆ ಟಿ20 ತಂಡಕ್ಕೆ ಹಾರ್ದಿಕ್ ಪಾಂಡ್ಯ ನಾಯಕರಾದರೆ, ಏಕದಿನ ತಂಡಕ್ಕೆ ರೋಹಿತ್ ಶರ್ಮಾ ನಾಯಕರಾಗಿ ಮುಂದುವರಿಯಲಿದ್ದಾರೆ. ಗಾಯದ ಕಾರಣಕ್ಕಾಗಿ ಕ್ರಿಕೆಟ್ನಿಂದ ದೂರವಿರುವ ಆಲ್ರೌಂಡರ್ ರವೀಂದ್ರ ಜಡೇಜಾ ಮತ್ತು ವೇಗಿ ಜಸ್ಪ್ರೀತ್ ಬೂಮ್ರಾರನ್ನು ಪರಿಗಣಿಸಲಾಗಿಲ್ಲ.
ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಲಾ 3 ಟಿ20, ಏಕದಿನ ಪಂದ್ಯವಾಡಲಿದೆ. ಸರಣಿ ಜನವರಿ 3 ರಿಂದ 15 ರವರೆಗೆ ನಡೆಯಲಿದೆ. ಟಿ20 ತಂಡಕ್ಕೆ ಯುವ ಆಟಗಾರರನ್ನು ಪರಿಗಣಿಸಲಾಗಿದ್ದು, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ರನ್ನು ಕೈಬಿಡಲಾಗಿದೆ. ಕಳಪೆ ಪ್ರದರ್ಶನದಿಂದಾಗಿ ಟೀಕೆಗೆ ಒಳಗಾಗಿರುವ ವಿಕೆಟ್ ಕೀಪರ್ ರಿಷಬ್ ಪಂತ್ ಸರಣಿಯಿಂದಲೇ ಹೊರಬಿದ್ದಿದ್ದಾರೆ.
ಹಾರ್ದಿಕ್ ನಾಯಕ, ಸೂರ್ಯ ಉಪನಾಯಕ:ವಿಶ್ವಕಪ್ ಸೋಲಿನ ಬಳಿಕ ಟಿ20 ತಂಡದ ಬದಲಾವಣೆಗೆ ಬಲವಾದ ಕೂಗು ಕೇಳಿಬಂದಿತ್ತು. ತಂಡದ ನಾಯಕತ್ವದ ಹೊಣೆಯನ್ನು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ ನೀಡಬೇಕು ಎಂದು ಒತ್ತಾಯಿಸಲಾಗಿತ್ತು. ಇದೀಗ ಸ್ಟಾರ್ ಆಲ್ರೌಂಡರ್ಗೆ ಆಯ್ಕೆಗಾರರು ನಾಯಕತ್ವ ಪಟ್ಟ ಕಟ್ಟಿದ್ದಾರೆ. ಮಿಂಚಿನ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿರುವ ಸೂರ್ಯಕುಮಾರ್ ಯಾದವ್ಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.
ಟಿ20ಗೆ ಹಿರಿಯ ಆಟಗಾರರಾದ ಕೊಹ್ಲಿ, ರೋಹಿತ್, ರಾಹುಲ್ ಅಲ್ಲದೇ ರಿಷಬ್ ಪಂತ್ರನ್ನೂ ಕೂಡ ಕೈಬಿಡಲಾಗಿದೆ. ರಾಹುಲ್ ತ್ರಿಪಾಠಿ, ಸಂಜು ಸ್ಯಾಮ್ಸನ್ ಉಮ್ರಾನ್ ಮಲಿಕ್ ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ಅವಕಾಶ ಪಡೆದಿದ್ದಾರೆ. ಆಲ್ರೌಂಡರ್ ಕೋಟಾದಲ್ಲಿ ದೀಪಕ್ ಹೂಡಾ, ವಾಷಿಂಗ್ಟನ್ ಸುಂದರ್, ಅಕ್ಸರ್ ಪಟೇಲ್ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ಐಪಿಎಲ್ ತಾರೆಯರ ಎಂಟ್ರಿ:ಇಂಡಿಯನ್ ಪ್ರೀಮಿಯರ್ ಲೀಗ್ನ(ಐಪಿಎಲ್) ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಡ್ ಆಗಿರುವ ವೇಗಿಗಳಾದ ಶಿವಂ ಮಾವಿ ಮತ್ತು ಮುಕೇಶ್ಕುಮಾರ್ ಭಾರತ ತಂಡದ ಕದ ಬಡಿದಿದ್ದಾರೆ. ಇದೇ ಮೊದಲ ಬಾರಿಗೆ ತಂಡದಲ್ಲಿ ಅವಕಾಶ ಪಡೆದಿರುವ ಇಬ್ಬರು ಆಟಗಾರರು ಉತ್ತಮ ಪ್ರದರ್ಶ ನೀಡಿ ಭವಿಷ್ಯ ಭದ್ರಪಡಿಸಿಕೊಳ್ಳಬೇಕಿದೆ.