ಜೋಹಾನ್ಸ್‌ಬರ್ಗ್ (ದಕ್ಷಿಣ ಆಫ್ರಿಕಾ): ಏಕದಿನ ವಿಶ್ವಕಪ್ನಲ್ಲಿ ಟಾಸ್ ಸ್ಕೋರ್ ಮಾಡಿದ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಲಿದ್ದಾರೆ ಎಂದು ಹರಿಣಗಳ ಪಡೆಯ ಮಾಜಿ ಆಟಗಾರ ಜಾಕ್ ಕಾಲಿಸ್ ಅಭಿಪ್ರಾಯಪಟ್ಟಿದ್ದಾರೆ.
ಭಾರತ ತಂಡ ಮೂರು ಮಾದರಿಯ ಕ್ರಿಕೆಟ್ ಸರಣಿಯನ್ನು ಆಡಲು ದಕ್ಷಿಣ ಆಫ್ರಿಕಾ ಪ್ರವಾಸವನ್ನು ಕೈಗೊಂಡಿದೆ. ಇದರಲ್ಲಿ ಟೀಮ್ ಇಂಡಿಯಾ ಮೂರು ಟಿ20, ಮೂರು ಏಕದಿನ ಮತ್ತು 2 ಟೆಸ್ಟ್ ಪಂದ್ಯವನ್ನು ಆಡಲಿದೆ. ಭಾನುವಾರ ಮೊದಲ ಟಿ20 ಪಂದ್ಯ ಮಳೆಯಿಂದ ರದ್ದಾಗಿದ್ದು, ಎರಡನೇ ಪಂದ್ಯ ಡಿ.12ರಂದು ನಡೆಯಲಿದೆ. ಏಕದಿನ ಪಂದ್ಯಗಳ ನಂತರ ಟೆಸ್ಟ್ ನಡೆಯಲಿದ್ದು, ಮೊದಲ ಪಂದ್ಯ ಡಿ. 26 ರಿಂದ 30 ವರೆಗೆ ಮತ್ತು ಎರಡನೇ ಪಂದ್ಯ 2024ರ ಜನವರಿ 3 ರಿಂದ 7 ವರೆಗೆ ನಡೆಯಲಿದೆ.
2023-2025ರ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಆವೃತ್ತಿಯ ಎರಡನೇ ಸರಣಿ ಇದಾಗಿದೆ. ಜುಲೈನಲ್ಲಿ ಭಾರತ ವೆಸ್ಟ್ ಇಂಡೀಸ್ ಸರಣಿಯನ್ನು ಆಡಿತ್ತು, ಅಲ್ಲಿ ನಡೆದ ಎರಡು ಪಂದ್ಯದಲ್ಲಿ ಒಂದು ಗೆಲುವು ಮತ್ತು ಡ್ರಾದಿಂದ ಸರಣಿ ಭಾರತದ ವಶವಾಗಿತ್ತು. ಆ ಸರಣಿಯಲ್ಲಿ ವಿರಾಟ್ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಅಲ್ಲದೇ ಇತ್ತೀಚೆಗೆ ಮುಕ್ತಾಯಗೊಂಡ ಏಕದಿನ ವಿಶ್ವಕಪ್ನಲ್ಲೂ ಭರ್ಜರಿ ಫಾರ್ಮ್ ಪ್ರದರ್ಶಿಸಿದ್ದಾರೆ. ಅನುಭವಿ ಬ್ಯಾಟರ್ ವಿರಾಟ್ ಹರಣಿಗಳ ನಾಡಿನಲ್ಲಿ ಅದೇ ಲಯವನ್ನು ಮುಂದುವರೆಸಿದಲ್ಲಿ ಭಾರತದ ಗೆಲುವು ಖಚಿತ ಎಂದು ಜಾಕ್ ಕಾಲಿಸ್ ಹೇಳಿದ್ದಾರೆ.
ವಿರಾಟ್ ಆಡಿದರೆ ಭಾರತಕ್ಕೆ ಗೆಲುವು:ಸ್ಟಾರ್ ಸ್ಪೋರ್ಟ್ನಲ್ಲಿ ಮಾತನಾಡಿರುವ ಅವರು,"ವಿರಾಟ್ ದಕ್ಷಿಣ ಆಫ್ರಿಕಾದಲ್ಲಿ ದೊಡ್ಡ ಸರಣಿ ಆಡುತ್ತಾರೆ ಎಂದು ನನಗೆ ಖಾತ್ರಿಯಿದೆ. ಕೊಹ್ಲಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಭಾರತಕ್ಕೆ ಸಹಾಯ ಮಾಡುವಲ್ಲಿ ಅವರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಭಾರತ ಇಲ್ಲಿ ಸರಣಿ ಗೆಲ್ಲಬೇಕಾದರೆ, ವಿರಾಟ್ ಉತ್ತಮ ಪ್ರದರ್ಶನ ನೀಡಲೇಬೇಕು. ವಿರಾಟ್ ಯಾವುದೇ ದೇಶದ ವಿರುದ್ಧ, ಯಾವುದೇ ನೆಲದಲ್ಲಿ ಎದುರಾಳಿ ತಂಡಕ್ಕೆ ಬಲಿಷ್ಟ ಪೈಪೋಟಿ ನೀಡುತ್ತಾರೆ. ಇಲ್ಲಿನ ಮೈದಾನಗಳ ಅರಿವೂ ಅವರಿಗಿದೆ, ಇಲ್ಲಿ ಯಶಸ್ಸನ್ನು ಕಂಡಿದ್ದಾರೆ" ಎಂದಿದ್ದಾರೆ.