ಬೆಂಗಳೂರು: ವಿಶ್ವಕಪ್ ಬೆನ್ನಲ್ಲೇ ಆಸ್ಟ್ರೇಲಿಯಾ ವಿರುದ್ಧ ಆರಂಭವಾದ 5 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ನೀಡಿದ್ದಲ್ಲದೇ, 3-1ರ ಅಂತರದಿಂದ ಸರಣಿ ವಶಪಡಿಸಿಕೊಂಡಿದೆ. ಭಾನುವಾರ ಅಂತಿಮ 5ನೇ ಟಿ20 ಪಂದ್ಯ ನಡೆಯಲಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದ ಪಡೆ ಜಯದ ಅಂತರ ಹೆಚ್ಚಿಸಿಕೊಂಡು ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ವಿಶ್ವಾಸ ವೃದ್ಧಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ.
ಇದರ ಜೊತೆಗೆ ನಾಲ್ಕು ಪಂದ್ಯದಲ್ಲಿ ಅವಕಾಶ ಸಿಗದೇ ಬೆಂಚ್ ಕಾದಿದ್ದ ಆಟಗಾರರು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಔಪಚಾರಿಕ ಪಂದ್ಯದಲ್ಲಿ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಸತತ ನಾಲ್ಕು ಪಂದ್ಯಗಳನ್ನು ಆಡಿದ ಆಟಗಾರರಿಗೆ ಕೋಚ್ ವಿವಿಎಸ್ ಲಕ್ಷ್ಮಣ್ ಮತ್ತು ನಾಯಕ ಸೂರ್ಯಕುಮಾರ್ ಯಾದವ್ ಕೋಕ್ ಕೊಡುವ ಸಾಧ್ಯತೆ ಇದೆ. ಐಪಿಎಲ್ ಮತ್ತು ಐರ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಿಂಚಿದ ಆಫ್ ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಮತ್ತು ಆಲ್ ರೌಂಡರ್ ಶಿವಂ ದುಬೆಗೆ ಅವಕಾಶ ಕೊಡುವ ಸಾಧ್ಯತೆ ಹೆಚ್ಚಿದೆ.
ರಾಯ್ಪುರದ ನಾಲ್ಕನೇ ಪಂದ್ಯಕ್ಕೆ ನಾಲ್ಕು ಬದಲಾವಣೆಗಳನ್ನು ಮಾಡಿಕೊಳ್ಳಲಾಗಿತ್ತು. ಅಲ್ಲದೇ ಕೊನೆಯ ಎರಡು ಟಿ20 ಪಂದ್ಯಕ್ಕೆ ಶ್ರೇಯಸ್ ಅಯ್ಯರ್ ಉಪನಾಯಕನಾಗಿ ತಂಡಕ್ಕೆ ಸೇರಿದ್ದರು. ವಿಶ್ವಕಪ್ ತಂಡದಲ್ಲಿ ಆಡಿದ್ದ ಇಶಾನ್ ಕಿಶನ್ ಅವರನ್ನು ಕಳೆದ ಪಂದ್ಯದಲ್ಲಿ ಕೈಬಿಟ್ಟು ವಿಕೆಟ್ ಕೀಪಿಂಗ್ ಜವಾಬ್ದಾರಿಯನ್ನು ಜಿತೇಶ್ ಶರ್ಮಾಗೆ ವಹಿಸಲಾಗಿತ್ತು.
ಸುಂದರ್ ಮತ್ತು ಶಿವಂ ಪ್ರದರ್ಶನ:ಭಾರತದ ಪರ ವಾಷಿಂಗ್ಟನ್ ಸುಂದರ್ , 40 ಟಿ20 ಪಂದ್ಯಗಳ 38 ಇನ್ನಿಂಗ್ಸ್‌ಗಳಲ್ಲಿ 31 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 1 ಅರ್ಧಶತಕದೊಂದಿಗೆ 107 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಬ್ಯಾಟ್‌ನಿಂದ 10 ಬೌಂಡರಿ ಹಾಗೂ 6 ಸಿಕ್ಸರ್‌ಗಳು ಕೂಡ ಬಂದಿವೆ. ಶಿವಂ ದುಬೆ ಭಾರತ ತಂಡದಲ್ಲಿ 18 ಟಿ20 ಪಂದ್ಯದಲ್ಲಿ 11 ಇನ್ನಿಂಗ್ಸ್‌ಗಳಲ್ಲಿ 1 ಅರ್ಧಶತಕದೊಂದಿಗೆ 152 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 9 ಬೌಂಡರಿ, 9 ಸಿಕ್ಸ ಗಳಿಸಿದ್ದಾರೆ. ಬೌಲಿಂಗ್ನಲ್ಲಿ 6 ವಿಕೆಟ್ ಕಿತ್ತಿದ್ದಾರೆ.