ಲಖನೌ (ಉತ್ತರ ಪ್ರದೇಶ): ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರೀಡಾಂಗಣದಲ್ಲಿ ಸೋಮವಾರ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಆಸ್ಟ್ರೇಲಿಯಾದ ಐದು ವಿಕೆಟ್ಗಳ ಗೆಲುವಿನಲ್ಲಿ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಪ್ರಮುಖ ಪಾತ್ರವಹಿಸಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ತಂಡದ ಪರ ಹೆಚ್ಚಿನ ವಿಕೆಟ್ ಪಡೆಯಲು ಉತ್ಸುಕರಾಗಿರುವ ಝಂಪಾ, ಎಕಾನಮಿ ರೇಟ್ ಬಗ್ಗೆ ಚಿಂತಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಸೋಮವಾರದ ಪಂದ್ಯದಲ್ಲಿ 47 ರನ್ ನೀಡಿ 4 ವಿಕೆಟ್ ಪಡೆದ ಆಡಮ್ ಝಂಪಾ, ಶ್ರೀಲಂಕಾ ತಂಡವನ್ನು 209 ರನ್ಗೆ ಕಟ್ಟಲು ಹಾಕುವಲ್ಲಿ ಪ್ರಮುಖ ಕಾರಣಕರ್ತರಾದರು. ಇದರಿಂದ ಆಸ್ಟ್ರೇಲಿಯಾ ತಂಡ ಸುಲಭವಾಗಿ ಗುರಿ ಬೆನ್ನಟ್ಟಿತ್ತು. ಆದಾಗ್ಯೂ, ಭಾರತ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಝಂಪಾ ದುಬಾರಿಯಾಗಿದ್ದರು. ಚೆನ್ನೈನಲ್ಲಿ ಟೀಂ ಇಂಡಿಯಾ ವಿರುದ್ಧ ವಿಕೆಟ್ ಪಡೆಯದೇ 53 ರನ್ ನೀಡಿದ್ದರು. ಲಖನೌದಲ್ಲಿ ದಕ್ಷಿಣ ಆಫ್ರಿಕಾದ ವಿರುದ್ಧ 70 ರನ್ ನೀಡಿ ಒಂದು ವಿಕೆಟ್ ಗಳಿಸಿದ್ದರು.
ಇದನ್ನೂ ಓದಿ:ವಿಶ್ವಕಪ್ ಕ್ರಿಕೆಟ್: ಮಾರ್ಷ್, ಜೋಶ್ ಅರ್ಧಶತಕದಾಟ; ಲಂಕಾ ಮಣಿಸಿದ ಆಸ್ಟ್ರೇಲಿಯಾಕ್ಕೆ ಮೊದಲ ಗೆಲುವು
ಈ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಸೋಲು ಕಂಡಿತ್ತು. ಶ್ರೀಲಂಕಾ ವಿರುದ್ಧದ ಗೆಲುವು ಕಾಂಗರೂ ಪಡೆಯ ವಿಶ್ವಕಪ್ ಅಭಿಯಾನವನ್ನು ಜೀವಂತವಾಗಿರಿಸಿದೆ. ಆಸ್ಟ್ರೇಲಿಯಾದ ಗೆಲುವಿನ ನಂತರ ಮಾತನಾಡಿದ ಝಂಪಾ, ನಾನು ತುಂಬಾ ಆತ್ಮಾವಲೋಕ ಮಾಡಿಕೊಳ್ಳುತ್ತೇನೆ. ಮೊದಲೆರಡು ಪಂದ್ಯಗಳಲ್ಲಿನ ಪ್ರರ್ದಶನದ ಬಗ್ಗೆ ಆಲೋಚನೆ ಮಾಡುತ್ತೇನೆ. ನಾನು ಯಾವಾಗಲೂ ವಿಕೆಟ್‌ಗಳನ್ನು ಪಡೆಯಲು ಪ್ರಯತ್ನಿಸುವ ಆಟಗಾರ. ಆದ್ದರಿಂದ ಅಂಕಿ - ಅಂಶಗಳು ಏನೇ ಇರಲಿ, ಇದರ ಬಗ್ಗೆ ಚಿಂತೆ ಮಾಡಲ್ಲ ಎಂದು ಹೇಳಿಕೊಂಡಿದ್ದಾರೆ.
ಇದೇ ನನ್ನ ಮನೋಭಾವ, ಇದೇ ನನ್ನಲ್ಲಿ ಹೆಚ್ಚಾಗಿ ಪ್ರತಿಬಿಂಬಿಸುತ್ತದೆ. ನಾನು ಬಯಸಿದ ಸ್ಥಳದಲ್ಲಿ ಚೆಂಡನ್ನು ಬೌಲ್ ಮಾಡಿದ್ದೇನೆಯೇ?, ನಾನು ಸರಿಯಾದ ನಿರ್ಧಾರಗಳನ್ನು ಮಾಡಿದ್ದೇನೆಯೇ?, ನಾನು ನನ್ನ ಆಟವನ್ನು ಬದಲಾವಣೆ ಮಾಡಲು ಸರಿಯಾದ ಸಾಲಿನಲ್ಲಿ ಇರಿಸಿದ್ದೇನೆಯೇ?, ಇದರ ಬಗ್ಗೆ ನಾನು ಯೋಚಿಸುತ್ತೇನೆ. ಅಂಕಿ-ಅಂಶಗಳ ಬಗ್ಗೆ ನಾನು ನಿಜವಾಗಿಯೂ ಹೆದರುವುದಿಲ್ಲ. ಪಂದ್ಯದ ಗೆಲುವಿಗೆ ಸಹಾಯ ಮಾಡಲು ಏನು ಮಾಡಬಹುದೋ, ಅದನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ತಂಡ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಈ ಕುರಿತು ಮಾತನಾಡಿದ ಝಂಪಾ, ಬೆಂಗಳೂರಿನಲ್ಲಿ ಪಾಕಿಸ್ತಾನದ ವಿರುದ್ಧ ನಿಜವಾಗಿಯೂ ದೊಡ್ಡ ಪಂದ್ಯ. ನಾವು ಎಲ್ಲವನ್ನೂ ಒಟ್ಟುಗೂಡಿಸಿ ಅಲ್ಲಿ ಉತ್ತಮ ಆಟವನ್ನು ಆಡಿದರೆ, ಎರಡು (ಗೆಲುವು) ಮತ್ತು ಎರಡು (ಸೋಲು) ಸಮನಾಂತರವಾಗುವುದರಿಂದ ಉತ್ತಮ ಭಾವನೆ ಬರಲಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಬೆನ್ನು ನೋವಿನ ಮಧ್ಯೆಯೂ ತಂಡದ ಗೆಲುವಿಗಾಗಿ ಆಡಮ್ ಹೋರಾಟ.. ಝಂಪಾ ಹೇಳಿದ್ದು ಹೀಗೆ..