ಕೋಲ್ಕತ್ತಾ: ದಕ್ಷಿಣ ಆಫ್ರಿಕಾ ತಂಡದ ವಿಕೆಟ್ ಕೀಪರ್, ಅಗ್ರ ಕ್ರಿಕೆಟ್ ಪಟು ಕ್ವಿಂಟನ್ ಡಿ ಕಾಕ್ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯ ಹೇಳಿದ್ದಾರೆ. ಇಲ್ಲಿಯ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಗುರುವಾರ ನಡೆದ ಐಸಿಸಿ ಪುರುಷರ ಕ್ರಿಕೆಟ್ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ವಿಶ್ವ ಹಾಗೂ ದಕ್ಷಿಣ ಆಫ್ರಿಕಾದ ಅಗ್ರ ಪಂಕ್ತಿಯ ಆಟಗಾರನ ಏಕದಿನ ಅಂತರರಾಷ್ಟ್ರೀಯ ವೃತ್ತಿಜೀವನ ಅಂತ್ಯಗೊಂಡಿದೆ.
ಟೂರ್ನಿಗೆ ಮುನ್ನವೇ ಈ ವಿಶ್ವಕಪ್ ಬಳಿಕ ಏಕದಿನ ಕ್ರಿಕೆಟ್ನಿಂದ ಹೊರಗುಳಿಯುವುದಾಗಿ ಅವರು ಹೇಳಿದ್ದರು. ಆದರೆ, ಟೂರ್ನಿಯುದ್ದಕ್ಕೂ ಅಬ್ಬರಿಸಿದ ಡಿ ಕಾಕ್, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ತಂಡವನ್ನು ಸೆಮಿಫೈನಲ್ ವರೆಗೂ ತಂದ ಬಹುಪಾಲು ಶ್ರೇಯಸ್ಸು ಕ್ವಿಂಟನ್ ಡಿ ಕಾಕ್ ಅವರಿಗೆ ಸಲ್ಲುತ್ತದೆ.
ವಿಕೆಟ್ ಪಡೆದ ಸಂಭ್ರಮದಲ್ಲಿ ದಕ್ಷಿಣ ಆಫ್ರಿಕಾ ತಂಡ (ಫೋಟೋ ಕೃಪೆ IANS)
2021ರಲ್ಲಿ ಟೀಂ ಇಂಡಿಯಾ ವಿರುದ್ಧ ನಡೆದ ಟೆಸ್ಟ್ ಸೋಲಿನ ಬಳಿಕ ಕ್ವಿಂಟನ್, ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಈ ದಿಢೀರ್ ನಿರ್ಧಾರ ಕ್ರಿಕೆಟ್ ಪ್ರೇಮಿಗಳಲ್ಲಿ ಅಚ್ಚರಿ ತರಿಸಿತ್ತು. ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ನಿರ್ಧಾರ ಪ್ರಕಟಿಸುವ ವೇಳೆ ಮಾತನಾಡಿದ್ದ ಡಿ ಕಾಕ್, "ಈ ನಿರ್ಧಾರ ಅತ್ಯಂತ ಸುಲಭವಾಗಿ ತೆಗೆದುಕೊಂಡಿದ್ದಲ್ಲ. ನಾನು ಸಾಕಷ್ಟು ಆಲೋಚನೆ ಮಾಡಿದ್ದೇನೆ. ನನ್ನ ಕುಟುಂಬವನ್ನು ಆದ್ಯತೆಯಾಗಿ ತೆಗೆದುಕೊಳ್ಳಬೇಕಿದೆ. ನಾನು ಮತ್ತು ಪತ್ನಿ ಸಾಶಾ ಮಗುವನ್ನು ಸ್ವಾಗತಿಸಲಿದ್ದು, ಈ ಬಗ್ಗೆಯೂ ಯೋಚಿಸಿ, ನಿರ್ಧಾರ ತೆಗೆದುಕೊಂಡಿದ್ದೇನೆ" ಎಂದಿದ್ದರು.
ವಿಕೆಟ್ ಪಡೆದ ಸಂಭ್ರಮದಲ್ಲಿ ದಕ್ಷಿಣ ಆಫ್ರಿಕಾ ತಂಡ (ಫೋಟೋ ಕೃಪೆ IANS)
ಸದ್ಯ ವಿಶ್ವಕಪ್ ಗೆಲ್ಲುವ ಸಮೀಪ ಬಂದು ಸೋತಿದ್ದರಿಂದ ಡಿ ಕಾಕ್, ಏಕದಿನ ಕ್ರಿಕೆಟ್ ಮಾದರಿಗೆ ಕಣ್ಣೀರಿನ ವಿದಾಯ ಹೇಳಿದ್ದಾರೆ. 2023ರ ವಿಶ್ವಕಪ್ನಲ್ಲಿ ಆಡಿದ 10 ಪಂದ್ಯಗಳಲ್ಲಿ 4 ಶತಕ ಸಿಡಿಸಿ ದಾಖಲೆ ನಿರ್ಮಿಸಿದರು. ವಾಂಖೆಡೆ ಸ್ಟೇಡಿಯಂನಲ್ಲಿ ನೆದರ್ಲೆಂಡ್ ವಿರುದ್ಧ 174 ರನ್ಗಳ ಇನ್ನಿಂಗ್ಸ್ ಆಡಿದ ಡಿ ಕಾಕ್, ಅಂತರರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ 12,000 ರನ್ ಪೂರೈಸಿದ ಆಟಗಾರ ಎಂಬ ಖ್ಯಾತಿ ಸಹ ತಮ್ಮದಾಗಿಸಿಕೊಂಡರು. ಅಲ್ಲದೇ ದಕ್ಷಿಣ ಆಫ್ರಿಕಾ ಪರ 12,000 ರನ್ ಗಡಿ ದಾಟಿದ ಮೊದಲ ವಿಕೆಟ್‌ಕೀಪರ್-ಬ್ಯಾಟರ್ ಹಾಗೂ ಏಳನೇ ಬ್ಯಾಟರ್ ಕೂಡ ಆದರು. ಡಿ ಕಾಕ್ ಸದ್ಯ 284 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 12,160 ರನ್ ಗಳಿಸಿದ್ದಾರೆ.
ಬಾಲ್ ಅನ್ನು ಬೌಂಡರಿಗೆ ಅಟ್ಟುತ್ತಿರುವ ಆಸೀಸ್ ಪಟು (ಫೋಟೋ ಕೃಪೆ IANS)
155 ಪಂದ್ಯಗಳಲ್ಲಿ 6,770 ರನ್ ಗಳಿಸಿರುವ ಡಿ ಕಾಕ್, ವೃತ್ತಿಜೀವನದಲ್ಲಿ 21 ಶತಕ ಮತ್ತು 30 ಅರ್ಧಶತಕಗಳನ್ನು ಬಾರಿಸಿದ್ದಾರೆ. 209 ಕ್ಯಾಚ್ ಸಹಿತ 17 ಸ್ಟಂಪಿಂಗ್ ಮಾಡಿದ್ದಾರೆ. ವಿಶ್ವದ ಅತ್ಯುತ್ತಮ ವಿಕೆಟ್ ಕೀಪರ್ ಆಗಿ ಹೊರಹೊಮ್ಮಿರುವ ಡಿ ಕಾಕ್, ದಕ್ಷಿಣ ಆಫ್ರಿಕಾದ ಆಟದ ದಂತಕಥೆಗಳಲ್ಲಿ ಒಬ್ಬರಾಗಿ ಉಳಿಯುತ್ತಾರೆ. ಅವರು ವಿಶ್ವಕಪ್ ಗೆಲ್ಲಲು ಬಯಸಿದ್ದರು. ಆದರೆ, ದುರದೃಷ್ಟವಶಾತ್ ಅದು ಕೈಗೂಡಲಿಲ್ಲ ಎಂದು ತಂಡದ ನಾಯಕ ಟೆಂಬಾ ಬವುಮಾ ವಿಶೇಷ ಬೀಳ್ಗೊಡುಗೆ ನೀಡಿದರು.
ಇದನ್ನೂ ಓದಿ:ಏಕದಿನ ಕ್ರಿಕೆಟ್‌ನಲ್ಲಿ 12,000 ರನ್ ಗಳಿಸಿದ ದಕ್ಷಿಣ ಆಫ್ರಿಕಾ ದಿಗ್ಗಜ ಬ್ಯಾಟರ್ ಕ್ವಿಂಟನ್ ಡಿ ಕಾಕ್