ದುಬೈ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಭಾಗವಹಿಸದಿದ್ದರೂ ಕೂಡಾ ರವಿಚಂದ್ರನ್ ಅಶ್ವಿನ್ ಅವರು ಟೆಸ್ಟ್ ಬೌಲಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದ್ದಾರೆ. 18 ತಿಂಗಳ ನಂತರ ಭಾರತದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದು ಅಂತಿಮ ಪಂದ್ಯದಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿ ಉತ್ತಮ ಬ್ಯಾಟಿಂಗ್ ಮಾಡಿದ ಅಜಿಂಕ್ಯ ರಹಾನೆ ಅವರ ರ್ಯಾಂಕಿಂಗ್ನಲ್ಲಿಯೂ ಏರಿಕೆಯಾಗಿದೆ. ಬೌಲಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರ ಬ್ಯಾಟಿಂಗ್ ರ್‍ಯಾಂಕಿಂಗ್ ಹೆಚ್ಚಳವಾಗಿದೆ.
ಇಂಗ್ಲೆಂಡ್ನ ಓವೆಲ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿತು. ಆದರೆ ಕೆಲವು ಬ್ಯಾಟರ್‌ಗಳು ತಂಡದ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಐಸಿಸಿ ನವೀಕರಿಸಿರುವ ರ್ಯಾಂಕಿಂಗ್ನಲ್ಲಿ ಏರಿಕೆ ಕಂಡಿದ್ದಾರೆ. ಟೆಸ್ಟ್ ಚಾಂಪಿಯನ್ಶಿಪ್ನ ಎರಡು ಇನ್ನಿಂಗ್ಸ್ನಲ್ಲಿ ಅಜಿಂಕ್ಯ ರಹಾನೆ 135 ರನ್ ಗಳಿಸಿದ್ದಾರೆ. ರಹಾನೆ ಭಾರತ ಪರ ಅತಿ ಹೆಚ್ಚು ರನ್ ಗಳಿಸಿ ಬ್ಯಾಟರ್ ಆಗಿದ್ದಾರೆ. ಶ್ರೇಯಾಂಕದಲ್ಲಿ 588 ಅಂಕ ಪಡೆದು ರಹಾನೆ 37ನೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಬ್ಯಾಟಿಂಗ್ ರ್ಯಾಂಕಿಂಗ್ನಲ್ಲಿ 6 ಸ್ಥಾನಗಳ ಏರಿಕೆ ಕಂಡು 94 ಶ್ರೇಯಾಂಕದಲ್ಲಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಶಾರ್ದೂಲ್ ಮೊದಲ ಇನ್ನಿಂಗ್ಸ್ನಲ್ಲಿ ಅರ್ಧಶತಕ ಗಳಿಸಿದ್ದರು. ಆದರೆ, ಎರಡನೇ ಇನ್ನಿಂಗ್ಸ್ನಲ್ಲಿ ಶೂನ್ಯಕ್ಕೆ ವಿಕೆಟ್ ಕೊಟ್ಟಿದ್ದರು. ಉಳಿದಂತೆ, 10ನೇ ಶ್ರೇಯಾಂಕದಲ್ಲಿ ರಿಷಬ್ ಪಂತ್ ಇದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಚೇತೇಶ್ವರ ಪೂಜಾರ ಕ್ರಮವಾಗಿ 12,13 ಮತ್ತು 25ನೇ ಸ್ಥಾದಲ್ಲಿದ್ದಾರೆ.