ದುಬೈ:ಐಸಿಸಿ ಟಿ-20 ವಿಶ್ವಕಪ್ನಲ್ಲಿಂದು ಗೆಲುವಿನ ಓಟ ಮುಂದುವರೆಸಿರುವ ಪಾಕಿಸ್ತಾನದ ವಿರುದ್ಧ ಆಫ್ಘಾನಿಸ್ತಾನ ಸೆಣಸಾಟ ನಡೆಸಲಿದೆ. ಸೆಮಿಫೈನಲ್ಗೆ ಮತ್ತಷ್ಟು ಹತ್ತಿರವಾಗುವ ಉದ್ದೇಶದಿಂದ ಉಭಯ ತಂಡಗಳಿಗೂ ಈ ಪಂದ್ಯ ಮಹತ್ವ ಪಡೆದುಕೊಂಡಿದೆ.
ದುಬೈನ ಅಂತಾರಾಷ್ಟ್ರೀಯ ಮೈದಾನದಲ್ಲಿ ರಾತ್ರಿ 7:30ಕ್ಕೆ ಪಂದ್ಯ ನಡೆಯಲಿದ್ದು, ಸೂಪರ್-12 ಹಂತದಲ್ಲಿ ಎರಡು ತಂಡಗಳು ಗೆಲುವಿನ ಆರಂಭ ಪಡೆದುಕೊಂಡಿರುವ ಕಾರಣ ಪಂದ್ಯ ಹೆಚ್ಚಿನ ಕುತೂಹಲ ಮೂಡಿಸಿದೆ.
ಪಾಕಿಸ್ತಾನ ಈಗಾಗಲೇ ತಾನಾಡಿರುವ ಭಾರತ ಹಾಗೂ ನ್ಯೂಜಿಲ್ಯಾಂಡ್ ವಿರುದ್ಧ ಜಯ ದಾಖಲು ಮಾಡಿದ್ರೆ, ಆಫ್ಘಾನಿಸ್ತಾನ ತಂಡ ಸ್ಕಾಟ್ಲೆಂಡ್ ವಿರುದ್ಧ ಏಕಪಕ್ಷೀಯವಾಗಿ ಗೆಲುವು ದಾಖಲು ಮಾಡಿದೆ. ಬಿ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡು ತಂಡಗಳು ಕ್ರಮವಾಗಿ ಮೊದಲೆರಡು ಸ್ಥಾನದಲ್ಲಿವೆ. ಈ ಹಿಂದೆ 2013ರ ಟಿ-20 ವಿಶ್ವಕಪ್ನಲ್ಲಿ ಉಭಯ ತಂಡಗಳು ಕೇವಲ 1 ಪಂದ್ಯದಲ್ಲಿ ಮುಖಾಮುಖಿಯಾಗಿದ್ದು, ಪಾಕಿಸ್ತಾನ ಕೊನೆಯ ಎಸೆತದಲ್ಲಿ ಗೆಲುವು ದಾಖಲು ಮಾಡಿತ್ತು.
ಬಲಿಷ್ಠ ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳಿಗೆ ಸೋಲಿನ ರುಚಿ ತೋರಿಸಿರುವ ಪಾಕ್ಗೆ ಆಫ್ಘಾನಿಸ್ತಾನ ಅಷ್ಟೊಂದು ಕಠಿಣ ಸ್ಪರ್ಧಿ ಅಲ್ಲದಿದ್ದರೂ, ಕೆಲವೊಂದು ಸಂದರ್ಭಗಳಲ್ಲಿ ತಿರುಗಿ ಬೀಳುವ ಸಾಮರ್ಥ್ಯ ಹೊಂದಿದೆ. ಆಫ್ಘಾನ್ ತಂಡದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವ ಆಟಗಾರರಿದ್ದು, ವಿಕೆಟ್ ಪಡೆದು ಮಿಂಚುವ ಸಾಮರ್ಥ್ಯವಿದೆ.