ನವದೆಹಲಿ:ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೂತನ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕುಸಿತ ಕಂಡಿದ್ದಾರೆ. ಐರ್ಲೆಂಡ್‌ನ ಯುವ ಆಟಗಾರ ಹ್ಯಾರಿ ಟೆಕ್ಟರ್ 722 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಕೊಹ್ಲಿ (719 ರೇಟಿಂಗ್ ಪಾಯಿಂಟ್) ಮತ್ತು ದಕ್ಷಿಣ ಆಫ್ರಿಕಾದ ಆಟಗಾರ ಕ್ವಿಂಟನ್ ಡಿ ಕಾಕ್ (718 ರೇಟಿಂಗ್ ಪಾಯಿಂಟ್) ಅವರನ್ನು ಹಿಂದಿಕ್ಕುವ ಮೂಲಕ ಏಕದಿನ ಪಂದ್ಯದಲ್ಲಿ ಅಗ್ರ 10 ಬ್ಯಾಟರ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಇತ್ತೀಚೆಗಷ್ಟೇ ನಡೆದ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಟೆಕ್ಟರ್ ಅದ್ಭುತ ಪ್ರದರ್ಶನ ನೀಡಿದ್ದು, ಇದೀಗ ಏಳನೇ ಸ್ಥಾನಕ್ಕೆ ಏರಿದ್ದಾರೆ.
ಕೊಹ್ಲಿ ಮತ್ತು ಡಿ ಕಾಕ್ ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ನಾಯಕ ಬಾಬರ್ ಅಜಮ್ (886 ರೇಟಿಂಗ್ ಪಾಯಿಂಟ್) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭಾರತದ ಟಾಪ್ 10 ಏಕದಿನ ಬ್ಯಾಟರ್‌ಗಳ ಪಟ್ಟಿಯಲ್ಲಿ ಕೊಹ್ಲಿ ಜೊತೆಗೆ ಶುಭಮನ್ ಗಿಲ್ ಮತ್ತು ರೋಹಿತ್ ಶರ್ಮಾ ಇದ್ದಾರೆ. ಗಿಲ್ ಐದನೇ ಸ್ಥಾನದಲ್ಲಿ ಮುಂದುವರಿದರೆ, ರೋಹಿತ್ ಶರ್ಮಾ 10ನೇ ಸ್ಥಾನದಲ್ಲಿದ್ದಾರೆ. ಬಿಡುಗಡೆಯಾದ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ಮತ್ತು ಟೆಕ್ಟರ್ ನಡುವೆ ಕೇವಲ ಮೂರು ರೇಟಿಂಗ್ ಪಾಯಿಂಟ್‌ಗಳ ವ್ಯತ್ಯಾಸವಿರುವುದನ್ನು ಕಾಣಬಹುದು.
ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ನಡೆಯಲಿದೆ. ಇದಾದ ಬಳಿಕ ಭಾರತೀಯ ತಂಡ ವೆಸ್ಟ್ ಇಂಡೀಸ್ ವಿರುದ್ಧ ಎರಡು ಟೆಸ್ಟ್, ಮೂರು ಏಕದಿನ ಮತ್ತು ಮೂರು ಟಿ20I ಗಳನ್ನು ಎದುರಿಸಲಿದೆ. ಈ ಮೂರು ಏಕದಿನ ಪಂದ್ಯಗಳಲ್ಲಿ ಕೊಹ್ಲಿ ಪ್ರದರ್ಶನ ಉತ್ತಮವಾಗಿದ್ದರೆ ಶ್ರೇಯಾಂಕ ಸುಧಾರಿಸುವ ಸಾಧ್ಯತೆಗಳಿವೆ. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಏಷ್ಯಾಕಪ್ ಕೂಡ ಕೊಹ್ಲಿಗೆ ವರದಾನವಾಗಬಹುದು. ಆದರೆ, ಈ ಬಾರಿಯ ಏಷ್ಯಾಕಪ್ ಪಾಕಿಸ್ತಾನದಲ್ಲೇ ನಡೆಯುವುದರಿಂದ ಟೀಂ ಇಂಡಿಯಾ ಭಾಗಿಯಾಗುವುದು ಅನುಮಾನ. ಇವರೆಡೂ ತಂಡಗಳು ಮುಖಾಮುಖಿಯಾಗಲಿದ್ದು ಪಾಕಿಸ್ತಾನ ಹೊರತು ಬೇರೆ ಸ್ಥಳದಲ್ಲಿ ನಿಗದಿ ಮಾಡುವ ಮಾತುಕತೆ ಕೂಡ ನಡೆದಿವೆ. ಅಂದುಕೊಂಡಂತೆ ಆಗದಿದ್ದರೆ ಪಂದ್ಯ ರದ್ದಾಗಲೂಬಹುದು.
ಸದ್ಯ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರ ಆರು ಆಟಗಾರರ ಪೈಕಿ ಕೊಹ್ಲಿ (438) 6ನೇ ಸ್ಥಾನದಲ್ಲಿದ್ದಾರೆ. ಪಟ್ಟಿಯಲ್ಲಿ ಮತ್ತೊಬ್ಬ ಆರ್‌ಸಿಬಿ ಆಟಗಾರ ಡುಪ್ಲೆ ಸಿಸ್ (631 ರನ್) ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಬೆಂಗಳೂರು ತಂಡ ಗುರುವಾರ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಲಿದೆ. ಇಂದಿನ ಪಂದ್ಯ ಗೆದ್ದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಪ್ಲೇಆಫ್ ಹಾದಿ ಸುಗಮವಾಗಲಿದೆ. ಹಾಗಾಗಿ ಎಲ್ಲರ ಕಣ್ಣು ಕೊಹ್ಲಿ ಅವರ ಮೇಲೆ ನೆಟ್ಟಿವೆ. ಇನ್ನು ನಿನ್ನೆ ಪ್ಲೇಆಫ್ಗೆ ಅರ್ಹತೆ ಪಡೆಯಲು ಗೆಲ್ಲಲೇಬೇಕಿದ್ದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಸೋಲು ಕಾಣುವ ಮೂಲಕ ರೇಸಿಂದ ಹೊರಬಿದ್ದಿತು.
ಇದನ್ನೂ ಓದಿ:ಪ್ಲೇಆಫ್ ರೇಸಿಂದ ಹೊರಬಿದ್ದ ಪಂಜಾಬ್: ದೆಹಲಿಗೆ ಆಟಕ್ಕುಂಟು ಲೆಕ್ಕಕ್ಕಿಲ್ಲದ ಗೆಲುವು