ಕೋಲ್ಕತ್ತಾ (ಪಶ್ಚಿಮ ಬಂಗಾಳ): 2023ರ ವಿಶ್ವಕಪ್ನಲ್ಲಿ ಸತತ ನಾಲ್ಕು ಸೋಲು ಕಂಡು ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಉಸಿರು ಬಂದಂತಾಗಿದೆ. ಬಾಂಗ್ಲಾ ವಿರುದ್ಧ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಸುಧಾರಣೆ ಕಂಡುಬಂದಿದೆ. ಬೌಲಿಂಗ್ನಲ್ಲಿ ಶಾಹೀನ್ ಅಫ್ರಿದಿ, ಮೊಹಮ್ಮದ್ ವಾಸಿಂ ಜೂನಿಯರ್ ಮಿಂಚಿದರೆ, ಬ್ಯಾಟಿಂಗ್ನಲ್ಲಿ ಅಬ್ದುಲ್ಲಾ ಶಫೀಕ್, ಫಖರ್ ಜಮಾನ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದು ಬಾಂಗ್ಲಾ ವಿರುದ್ಧ ಪಾಕಿಸ್ತಾನ 17 ಓವರ್ ಬಾಕಿ ಇರುವಂತೆ 7 ವಿಕೆಟ್ನಿಂದ ಗೆಲುವು ದಾಖಲಿಸಿದೆ. 7 ಪಂದ್ಯದಲ್ಲಿ 3ನೇ ಗೆಲುವು ದಾಖಲಿಸಿರುವ ಪಾಕ್, ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಮೂಲಕ ಸೆಮೀಸ್ ಕನಸು ಇನ್ನೂ ಜೀವಂತವಾಗಿ ಉಳಿಸಿಕೊಂಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶಕ್ಕೆ ಪಾಕ್ ಬೌಲರ್ಗಳ ವಿರುದ್ಧ ಹೋರಾಡಿ ದೊಡ್ಡ ಮೊತ್ತ ಕಲೆಹಾಕಲು ಸಾಧ್ಯವಾಗಲಿಲ್ಲ. ಮಹಮ್ಮದುಲ್ಲಾ (56), ಲಿಟ್ಟನ್ ದಾಸ್ (45), ಶಕೀಬ್ ಅಲ್ ಹಸನ್ (43) ಅವರ ಇನ್ನಿಂಗ್ಸ್ ಬಲದಿಂದ 204 ರನ್ ಗಳಿಸಿತು.
ಈ ಒತ್ತಡರಹಿತ ಗುರಿಯನ್ನು ಪಾಕ್ ಆರಂಭಿಕರು ಉತ್ತಮವಾಗಿ ವಿಕೆಟ್ ಕೊಡದೇ ನಿಭಾಯಿಸಿದರು. ಆರಂಭಿಕರಾದ ಅಬ್ದುಲ್ಲಾ ಶಫೀಕ್ ಮತ್ತು ಫಖರ್ ಜಮಾನ್ 128 ರನ್ನ ಬೃಹತ್ ಜತೆಯಾಟ ಮಾಡಿದರು. ಇಬ್ಬರ ಜತೆಯಾಟದಿಂದ ಪಾಕಿಸ್ತಾನ ಸುಲಭ ಗೆಲುವು ದಾಖಲಿಸುತ್ತದೆ ಎಂಬ ವಾತಾವರಣ ಇತ್ತು. ಆದರೆ, 69 ಬಾಲ್ ಎದುರಿಸಿ 9 ಬೌಂಡರಿ, 2 ಸಿಕ್ಸ್ನಿಂದ 68 ರನ್ ಇನ್ನಿಂಗ್ಸ್ ಕಟ್ಟಿದ್ದ ಅಬ್ದುಲ್ಲಾ ಶಫೀಕ್ ವಿಕೆಟ್ ಕೊಟ್ಟರು. ಇದಾದ ನಂತರ ಬಂದ ನಾಯಕ ಬಾಬರ್ ಅಜಮ್ ರನ್ ಗಳಿಸಲು ಪರದಾಡಿದರು.