ಅಹಮದಾಬಾದ್ (ಗುಜರಾತ್):ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ವಿಶ್ವಕಪ್ ಕದನ ನಡೆಯುತ್ತಿದ್ದು, ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆರಿಸಿಕೊಂಡಿದೆ. ಸಾಂಪ್ರದಾಯಿಕ ಬದ್ಧವೈರಿ ಪಾಕಿಸ್ತಾನಕ್ಕೆ ಬ್ಯಾಟಿಂಗ್ ಮಾಡುವಂತೆ ಆಹ್ವಾನ ನೀಡಿದೆ. ಐಸಿಸಿ ಪುರುಷರ ಏಕದಿನ ವಿಶ್ವಕಪ್ 2023ರ 12ನೇ ಪಂದ್ಯ ಇದಾಗಿದ್ದು, ಈ ಹೈವೋಲ್ಟೇಜ್ ಪಂದ್ಯದ ವೀಕ್ಷಣೆಗೆ ಪ್ರಪಂಚವೇ ಕಾದು ಕುಳಿತಿದೆ.
ಸತತ ಗೆಲುವಿನೊಂದಿಗೆ ಏಕದಿನ ವಿಶ್ವಕಪ್ ಅಭಿಯಾನ ಆರಂಭಿಸಿರುವ ಉಭಯ ತಂಡಗಳು, ಇಂದಿನ ಪಂದ್ಯದ ಮೇಲೂ ಕಣ್ಣಿಟ್ಟಿವೆ. ಮೊದಲೇ ಹೈವೋಲ್ಟೇಜ್ ಪಂದ್ಯವಾಗಿತ್ತು. ಗೆಲ್ಲುವ ಬಲಾಬಲದಿಂದ ಇಂದಿನ ಪಂದ್ಯ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಪಂದ್ಯದ ವೀಕ್ಷಣೆಗೆ ಇಡೀ ಜಗತ್ತೇ ಸಾಕ್ಷಿಯಾಗಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ನರೇಂದ್ರ ಮೋದಿ ಸ್ಟೇಡಿಯಂ ಭರ್ತಿಯಾಗಿದೆ. ಎಲ್ಲಿ ನೋಡಿದರೂ ಟೀಂ ಇಂಡಿಯಾ ತಂಡದ ಜರ್ಸಿ, ಟಿ ಶರ್ಟ್‌ಗಳನ್ನು ಧರಿಸಿರುವ ಕ್ರಿಕೆಟ್ ಅಭಿಮಾನಿಗಳೇ ಕಾಣುತ್ತಿದ್ದಾರೆ.
ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ, ಈಗಾಗಲೇ ಆಸ್ಟ್ರೇಲಿಯಾ ಮತ್ತು ಅಫ್ಘಾನಿಸ್ತಾನ ವಿರುದ್ಧ ಗೆಲುವು ಪಡೆದಿದ್ದು, ಪಾಕ್ ತಂಡವನ್ನು ಮಣಿಸಿ ಹ್ಯಾಟ್ರಿಕ್ ಗೆಲುವಿಗಾಗಿ ಕಾಯುತ್ತಿದೆ. ಅದೇ ರೀತಿ ಬಾಬರ್ ಅಜಮ್ ಪಡೆಯ ಪಾಕ್ ತಂಡ ಕೂಡ ಈಗಾಗಲೇ ನೆದರ್ಲೆಂಡ್ಸ್ ಮತ್ತು ಶ್ರೀಲಂಕಾ ತಂಡಗಳನ್ನು ಮಣಿಸಿ ಟೀಂ ಇಂಡಿಯಾವನ್ನು ಎದುರು ನೋಡುತ್ತಿದೆ. ಉಭಯ ತಂಡಗಳು ಎರಡು ಪಂದ್ಯಗಳನ್ನು ಗೆದ್ದಿದ್ದರಿಂದ ನೆಟ್ ರನ್ ರೇಟ್ ಹಾಗೂ ಅಂಕಪಟ್ಟಿಯಲ್ಲಿ ಹೆಚ್ಚು ಕಡಿಮೆ ಸಮಬಲದಲ್ಲಿವೆ.
ವಿಶ್ವಕಪ್ನಲ್ಲಿ ಉಭಯ ತಂಡಗಳು ಇದುವರೆಗೂ ಏಳು ಬಾರಿ ಮುಖಾಮುಖಿಯಾಗಿದ್ದು, ಭಾರತವೇ ಮೇಲುಗೈ ಸಾಧಿಸಿದೆ. ವಿಶ್ರಾಂತಿಯಲ್ಲಿದ್ದ ಭಾರತದ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಮತ್ತೆ ಆಗಮಿಸಿದ್ದರಿಂದ ತಂಡಕ್ಕೆ ಬಲ ಬಂದಂತಾಗಿದೆ. ಇನ್ನು 2021ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡ, ಭಾರತವನ್ನು ಮಣಿಸಿದ್ದರಿಂದ ಆ ಇತಿಹಾಸವನ್ನು ಮತ್ತೆ ಸೃಷ್ಟಿಸುವ ಉತ್ಸಾಹದಲ್ಲಿದೆ. ಎರಡೂ ತಂಡಗಳು ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಫಿಟ್ ಆ್ಯಂಡ್ ಫೈನ್ ಆಗಿದ್ದು ವಿಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಅನ್ನೋದನ್ನು ಕಾದು ನೋಡಬೇಕಿದೆ.