ಲಖನೌ (ಉತ್ತರ ಪ್ರದೇಶ):ಹಾಲಿ ಚಾಂಪಿಯನ್ ಇಂಗ್ಲೆಂಡ್ 2023ರ ವಿಶ್ವಕಪ್ನಲ್ಲಿ ಸತತ 5ನೇ ಸೋಲನುಭವಿಸಿದ್ದು ಪ್ಲೇ ಆಪ್ನಿಂದ ಹೊರ ಬಿದ್ದಿದೆ. ಟೀಮ್ ಇಂಡಿಯಾ 6ನೇ ಗೆಲುವು ಸಾಧಿಸಿ ಪ್ಲೇ ಆಫ್ನಲ್ಲಿ ಸ್ಥಾನವನ್ನು ಪಕ್ಕಾ ಮಾಡಿಕೊಂಡಿದೆ. ಭಾರತ ನೀಡಿದ್ದ 230 ರನ್ನ ಸಂಕ್ಷಿಪ್ತ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್ ಪ್ರಬಲ ಬೌಲಿಂಗ್ ದಾಳಿಯನ್ನು ಎದುರಿಸಲಾಗದೇ 129ಕ್ಕೆ ಸರ್ವ ಪತನ ಕಂಡಿತು. ಇದರಿಂದ ಭಾರತ 100 ರನ್ಗಳ ಅಂತರ ಬೃಹತ್ ಗೆಲುವು ದಾಖಲಿಸಿತು. ಶಮಿ ಸತತ ಎರಡನೇ ಪಂದ್ಯದಲ್ಲಿ 4 ವಿಕೆಟ್ ಕಿತ್ತರೆ, ಬುಮ್ರಾ 3 ಮತ್ತು ಕುಲ್ದೀಪ್ 2 ವಿಕೆಟ್ ಪಡೆದು ಮಿಂಚಿದರು.
230 ರನ್ ಸಣ್ಣ ಗುರಿಯನ್ನು ಭಾರತೀಯ ಬೌಲರ್ಗಳು ಯಶಸ್ವಿಯಾಗಿ ನಿಯಂತ್ರಿಸಿದರು. ಈ ಗೆಲುವು ತಂಡ ಬೌಲರ್ಗೆ ಸಲ್ಲಬೇಕು. 8ರ ವರೆಗೆ ಬಲಿಷ್ಠ ಬ್ಯಾಟಿಂಗ್ ಬಲವನ್ನು ಹೊಂದಿದ್ದ ತಂಡವನ್ನು 129 ರನ್ಗೆ ಸರ್ವಪತನ ಕಾಣುವಂತೆ ಮಾಡಿ ಬ್ಲೂ ಬಾಯ್ಸ್, ಮಂಜಿನ ನಡುವೆಯೂ ಯಶಸ್ವಿ ಬೌಲಿಂಗ್ ಸೂತ್ರವನ್ನು ಹೆಣೆದರು. ಹಾಲಿ ಚಾಂಪಿಯನ್ ಇಂಗ್ಲೆಂಡ್ 6 ಪಂದ್ಯದಲ್ಲಿ ಸತತ ಐದು ಸೋಲು ಕಂಡಿದ್ದು ವಿಶ್ವಕಪ್ನಿಂದ ಹೊರಬಿದ್ದಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ ಆಂಗ್ಲರ ಬೌಲಿಂಗ್ ದಾಳಿಗೆ ತತ್ತರಿಸಿತ್ತು. ರೋಹಿತ್ ಶರ್ಮಾ (87) ಮತ್ತು ಸೂರ್ಯಕುಮಾರ್ ಯಾದವ್ (49) ಅವರ ಇನ್ನಿಂಗ್ಸ್ನ ನೆರವಿನಿಂದ ಭಾರತ 50 ಓವರ್ನಲ್ಲಿ 9 ವಿಕೆಟ್ ಕಳೆದುಕೊಂಡು 230ರನ್ ಗಳಿಸಿತ್ತು. ಈ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಭಾರತ ಫಸ್ಟ್ ಬ್ಯಾಟಿಂಗ್ ಮಾಡಿತ್ತು. ಕಳೆದ ಐದು ಪಂದ್ಯದಲ್ಲಿ ಭಾರತ ಎರಡನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡಿ ಜಯಿಸಿತ್ತು.
230 ರನ್ನ ಸಂಕ್ಷಿಪ್ತ ಗುರಿಯನ್ನು ಬೆನ್ನತ್ತಿದ್ದ ಇಂಗ್ಲೆಂಡ್ 30ರನ್ ಜೊತೆಯಾಟದ ಆರಂಭವನ್ನು ಪಡೆಯಿತು. ಆದರೆ ನಂತರ 10 ರನ್ ಕೆಲೆಹಾಕುವುದರಲ್ಲಿ ತಂಡ 4 ವಿಕೆಟ್ಗಳನ್ನು ಕಳೆದುಕೊಂಡಿತು. ಡೇವಿಡ್ ಮಲಾನ್ (16), ಜೋ ರೂಟ್ (0), ಬೆನ್ ಸ್ಟೋಕ್ಸ್ (0), ಜಾನಿ ಬೈರ್‌ಸ್ಟೋವ್ (14) ಅವರ ವಿಕೆಟ್ಗಳು ಬೆನ್ನು ಬೆನ್ನು ಉರುಳಿತು. ನಂತರ ತಂಡವನ್ನು ಭಾರತೀಯ ಬೌಲರ್ಗಳು ಕಮ್ಬ್ಯಾಕ್ ಮಾಡದಂತೆ ನೋಡಿಕೊಂಡರು. ಇದರಿಂದ ಜೋಸ್ ಬಟ್ಲರ್ (10), ಮೊಯಿನ್ ಅಲಿ (15), ಲಿಯಾಮ್ ಲಿವಿಂಗ್‌ಸ್ಟೋನ್ (27), ಕ್ರಿಸ್ ವೋಕ್ಸ್ (10), ಆದಿಲ್ ರಶೀದ್ (13), ಮಾರ್ಕ್ ವುಡ್ (0) ವಿಕೆಟ್ಗಳು 10 ರನ್ಗಳ ಅಂತರದಲ್ಲಿ ಉರುಳಿದವು. ಇದರಿಂದ ಆಂಗ್ಲರು ಕೇವಲ 129ಕ್ಕೆ ಆಲ್ಔಟ್ ಆದರು.
ಪ್ರಬಲ ಬೌಲಿಂಗ್ ದಾಳಿ: ಹೊಸ ಬಾಲ್ನಲ್ಲಿ ಬಿಗಿ ದಾಳಿ ನಡೆಸಿದ ತ್ರಿವಳಿ ವೇಗಿಗಳು ರನ್ಗೆ ಸಂಪೂರ್ಣ ಕಡಿವಾಣ ಹಾಕಿ ಒತ್ತಡ ತಂದರು. ಮೊದಲ ನಾಲ್ಕು ಬ್ಯಾಟರ್ಗಳನ್ನು ಶಮಿ ಮತ್ತು ಬುಮ್ರಾ ಕಿತ್ತರು. ಕಳೆದ ಪಂದ್ಯದಿಂದ ತಂಡದಲ್ಲಿ ಸ್ಥಾನ ಪಡೆದ ಮೊಹಮ್ಮದ್ ಶಮಿ ಸತತ ಎರಡು ಪಂದ್ಯದಲ್ಲಿ ಯಶಸ್ವಿಯಾಗಿ 4 ವಿಕೆಟ್ಗಳನ್ನು ಕಬಳಿಸಿ ಪ್ರಬಾವ ಬೀರಿದರು. ಇನ್ನಿಂಗ್ಸ್ನಲ್ಲಿ 7 ಓವರ್ ಮಾಡಿದ ಶಮಿ 2 ಮೇಡನ್ ಓವರ್ ಜೊತೆಗೆ 3.1ರ ಎಕಾನಮಿಯಲ್ಲಿ 4 ವಿಕೆಟ್ ಕಬಳಿಸಿದರೆ, ಬುಮ್ರಾ 6.5 ಓವರ್ನಿಂದ 1 ಮೇಡೆನ್ ಓವರ್ನಿಂದ 4.7 ಎಕಾಮಿಯಲ್ಲಿ 3 ವಿಕೆಟ್ ಕಿತ್ತರು.
ನಾಯಕ ಶರ್ಮಾ ಪಂದ್ಯ ಶ್ರೇಷ್ಠ: 100ನೇ ಪಂದ್ಯದ ನಾಯಕತ್ವವನ್ನು ವಹಿಸಿಕೊಂಡಿರುವ ರೋಹಿತ್ ಶರ್ಮಾ ಜವಾಬ್ದಾರಿಯುತ 87 ರನ್ನ ಇನ್ನಿಂಗ್ಸ್ ಆಡಿ ವಿಕೆಟ್ ಪತನದ ನಡುವೆ ತಂಡಕ್ಕೆ ನೆರವಾದರು. ಅಲ್ಲದೇ 48 ರನ್ ಗಳಿಸಿದಾಗ ಶರ್ಮಾ 18,000 ಅಂತಾರಾಷ್ಟ್ರೀಯ ರನ್ ಗಡಿಯನ್ನು ತಲುಪಿದ ಸಾಧನೆಯನ್ನು ಮಾಡಿದರು. ಹೀಗಾಗಿ ರೋಹಿತ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನೂ ಓದಿ:ವಿಶ್ವಕಪ್ನಲ್ಲಿ ಶ್ರೀಲಂಕಾಕ್ಕೆ ಗಾಯದ ಬರೆ; ಲಹಿರು ಕುಮಾರ ಬದಲಿಗೆ ದುಷ್ಮಂತ ಚಮೀರಾ ತಂಡಕ್ಕೆ