ಮುಂಬೈ: ಭಾರತ ತಂಡದಿಂದ ಕಡೆಗಣಿಸಲ್ಪಟ್ಟ ಕ್ರಿಕೆಟಿಗರಲ್ಲಿ ಒಬ್ಬರಾಗಿರುವ ಅಂಬಾಟಿ ರಾಯುಡು ಮುಂದಿನ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡುವುದಕ್ಕೆ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. ಜೊತೆಗೆ 2022ರ ಐಪಿಎಲ್ನ ಮೆಗಾ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮತ್ತೆ ತಮ್ಮನ್ನು ಖರೀದಿಸುವ ಭರವಸೆಯಿದೆ ಎಂದು ಮಂಗಳವಾರ ಹೈದರಾಬಾದ್ ಕ್ರಿಕೆಟಿಗ ತಿಳಿಸಿದ್ದಾರೆ.
36 ವರ್ಷದ ಕ್ರಿಕೆಟಿಗ ಅಂಬಾಟಿ ರಾಯುಡು 2019ರ ಏಕದಿನ ವಿಶ್ವಕಪ್ ಆಯ್ಕೆಯ ವೇಳೆ ಕಡೆಗಣನೆಗೆ ಒಳಗಾಗದರು. ನಂತರ ತಾವಾಗಿಯೇ ಭಾರತ ತಂಡದ ಆಯ್ಕೆಯಿಂದ ಹಿಂದೆ ಸರಿದರು. ಕೆಲವು ದಿನಗಳ ನಂತರ ನಿವೃತ್ತಿ ಘೋಷಿಸಿ ನಂತರ ಮತ್ತೆ ವಾಪಸ್ ತೆಗೆದುಕೊಂಡು ದೇಶಿ ಕ್ರಿಕೆಟ್ ಮತ್ತು ಐಪಿಎಲ್ನಲ್ಲಿ ಆಡುತ್ತಾ ಬರುತ್ತಿದ್ದಾರೆ. 2018ರಲ್ಲಿ ಸಿಎಸ್ಕೆ ನಿಷೇಧದಿಂದ ಹಿಂತಿರುಗಿದಾಗಿನಿಂದಲೂ ಅವರೂ ಅದೇ ತಂಡದ ಪರ ಆಡುತ್ತಾ ಬರುತ್ತಿದ್ದಾರೆ. ಈ 4 ವರ್ಷಗಳಲ್ಲಿ 2 ಬಾರಿ ಚಾಂಪಿಯನ್ ಮತ್ತು ಒಮ್ಮೆ ರನ್ನರ್ ಅಪ್ ಆದ ಸಿಎಸ್ಕೆ ತಂಡದಲ್ಲಿ ರಾಯುಡು ಪ್ರಮುಖ ಪಾತ್ರ ವಹಿಸಿದ್ದರು.
ನಾನು ಫಿಟ್ ಮತ್ತು ಫಾರ್ಮ್ನಲ್ಲಿರುವವರೆಗೂ ಕ್ರಿಕೆಟ್ ಆಡುವುದಕ್ಕೆ ಇಷ್ಟಪಡುತ್ತೇನೆ. ಮುಂದಿನ ಮೂರು ವರ್ಷಗಳ ಸೈಕಲ್ಗೆ ನಾನು ಸಿದ್ಧನಾಗಿದ್ದೇನೆ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳಲು ಸಾಕಷ್ಟು ಕಠಿಣ ಪರಿಶ್ರಮ ಪಡುತ್ತಿದ್ದೇನೆ. ಇತ್ತೀಚೆಗೆ ನಡೆದ ವಿಜಯ ಹಜಾರೆ ಟ್ರೋಫಿಯಲ್ಲಿ 6 ದಿನಗಳಲ್ಲಿ ನಾನು 5 ಏಕದಿನ ಪಂದ್ಯಗಳನ್ನಾಡಿದ್ದೇನೆ. ಆದ್ದರಿಂದ ನಾನು ಉತ್ತಮ ಶೇಪ್ನಲ್ಲಿದ್ದು ಕಡಿಮೆ ಎಂದರೂ ಮುಂದಿನ 3 ವರ್ಷಗಳ ಕಾಲ ಕ್ರಿಕೆಟ್ ಆಡುವ ವಿಶ್ವಾಸವಿದೆ ಎಂದು ರಾಯುಡು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಧೋನಿ ಪ್ರಭಾವ..
ಧೋನಿ ಭಾಯ್ ನನ್ನಿಂದ ಅತ್ಯುತ್ತಮ ಪ್ರದರ್ಶನ ತರಲು ಪ್ರಭಾವ ಬೀರಿದ್ದಾರೆ. ನನ್ನಲ್ಲಿ ಮಾತ್ರವಲ್ಲದೆ ಅವರು ತಂಡದ ಪ್ರತಿಯೊಬ್ಬರ ಮೇಲೂ ಪ್ರಭಾವ ಬೀರಿದ್ದಾರೆ ಮತ್ತು ಎಲ್ಲರಿಂದಲೂ ಅತ್ಯುತ್ತಮವಾದದ್ದನ್ನು ಹೊರ ತರುತ್ತಾರೆ. ಹಾಗಾಗಿಯೇ ಅವರು ಭಾರತ ಕಂಡ ಅತ್ಯುತ್ತಮ ನಾಯಕರಾಗಿದ್ದಾರೆ ಎಂದು ರಾಯುಡು ಬಣ್ಣಿಸಿದ್ದಾರೆ.