ನವದೆಹಲಿ: ವಿಶ್ವಕಪ್ ಮುನ್ನ ಭಾರತ ಮೂರು ಏಕದಿನ ಪಂದ್ಯದ ಸರಣಿಯನ್ನು ಆಸ್ಟ್ರೇಲಿಯಾದ ವಿರುದ್ಧ ಆಡುತ್ತಿದೆ. ಎರಡು ಪಂದ್ಯದ ನಾಯಕತ್ವವನ್ನು ಕನ್ನಡಿಗ ಕೆ ಎಲ್ ರಾಹುಲ್ಗೆ ನೀಡಲಾಗಿದೆ. ನಿನ್ನೆ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಭಾರತ 5 ವಿಕೆಟ್ಗಳಿಂದ ಮಣಿಸಿದೆ. ಈ ಗೆಲುವಿನ ಸಹಾಯದಿಂದ ಭಾರತ ಐಸಿಸಿ ಶ್ರೇಯಾಂಕದಲ್ಲಿ ನಂ.1 ತಂಡವಾಗಿದೆ.
ಈ ಪಂದ್ಯದ ಗೆಲುವಿನ ನಂತರ ನಾಯಕ ಕೆ ಎಲ್ ರಾಹುಲ್ ಜಿಯೋ ಸಿನಿಮಾದ ಜೊತೆಗೆ ಮಾತನಾಡಿದ್ದು, 2011ರಲ್ಲಿ ಭಾರತ ವಿಶ್ವಕಪ್ ಗೆದ್ದ ಕ್ಷಣವನ್ನು ನೆನೆದಿದ್ದಾರೆ. ಅಲ್ಲದೇ ಮತ್ತೊಮ್ಮೆ ಇಂತಹ ಐತಿಹಾಸಿಕ ಕ್ಷಣವನ್ನು ಮುಂಬರುವ 2023 ಆವೃತ್ತಿಯ ಮೂಲಕ ಅದನ್ನು ಮರುಸೃಷ್ಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
"2011 ವಿಶ್ವಕಪ್ನ ಫೈನಲ್ ಸಮಯದಲ್ಲಿ ನಾನು ಬೆಂಗಳೂರಿನಲ್ಲಿ ಕೆಲವು ಸ್ನೇಹಿತರೊಂದಿಗೆ ಆಟಗಳನ್ನು ನೋಡುತ್ತಿದ್ದೆ. ಮೊದಲೆರಡು ವಿಕೆಟ್ ಉರುಳಿದಾಗ ಪಂದ್ಯವನ್ನು ಸೋತೆವು ಎಂದುಕೊಂಡೆವು. ಆದರೆ ಕೊನೆಯಲ್ಲಿ ಧೋನಿ ಪಂದ್ಯವನ್ನು ಗೆಲ್ಲಿಸಿದರು. ವಿಜಯದ ನಂತರ ನಾವು ಬೆಂಗಳೂರಿನ ಗಲ್ಲಿಯಲ್ಲಿ ಬೈಕ್ನಲ್ಲಿ ಪ್ರಯಾಣಿಸಿದ್ದೆವು. ಆಗ ಗಲ್ಲಿಗಲ್ಲಿಯಲ್ಲಿ ಸಂಭ್ರಮಾಚರಣೆ ನಡೆಯುತ್ತಿತ್ತು. ಎಲ್ಲರೂ ಕುಣಿದು ಸಂಭ್ರಮಿಸುತ್ತಿದ್ದರು. ಅದು ಭಾರತೀಯರಾಗಿ ನಮಗೆಲ್ಲರಿಗೂ ಹೆಮ್ಮೆಯ ಕ್ಷಣವಾಗಿದೆ ಮತ್ತು ನಮ್ಮ ದೇಶದ ಜನರಿಗಾಗಿ ನಾವು ಅದನ್ನು ಮರುಸೃಷ್ಟಿಸಬಹುದು ಎಂದು ಆಶಿಸುತ್ತೇನೆ" ಎಂದು ರಾಹುಲ್ ಹೇಳಿದ್ದಾರೆ.
ಐಪಿಎಲ್ ವೇಳೆ ಗಾಯಕ್ಕೆ ತುತ್ತಾಗಿ ತಂಡದಿಂದ ಸುಮಾರು ಆರು ತಿಂಗಳ ಕಾಲ ಹೊರಗುಳಿದಿದ್ದ ರಾಹುಲ್ ಏಷ್ಯಾಕಪ್ಗೆ ನೇರವಾಗಿ ಆಯ್ಕೆ ಆದರು. ಅಲ್ಲಿ ಪಾಕಿಸ್ತಾನದ ಮೇಲೆ ಶತಕದ ಜೊತೆಗೆ ಉತ್ತಮ ಪ್ರದರ್ಶನ ನೀಡಿದರು. ನಂತರ ಈಗ ಆಸ್ಟ್ರೇಲಿಯಾದ ಭಾರತ ಪ್ರವಾಸದ ಪಂದ್ಯಕ್ಕೆ ನಾಯಕರಾಗಿ ಆಯ್ಕೆ ಆಗಿದ್ದಾರೆ. ಮೊದಲ ಪಂದ್ಯ ಅವರ ನಾಯಕತ್ವದಲ್ಲಿ ಭಾರತ ಸಾಂಘಿಕ ಪ್ರದರ್ಶನ ನೀಡಿ ಸುಲಭ ಜಯ ಸಾಧಿಸಿದೆ.