ಪುಣೆ:ರಾಜಸ್ಥಾನ್ ರಾಯಲ್ಸ್ ತಂಡದ ರಿಯಾನ್ ಪರಾಗ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವೇಗಿ ಹರ್ಷಲ್ ಪಟೇಲ್ ನಡುವೆ ವಾಗ್ವಾದ ನಡೆದಿದ್ದು, ಕೊನೆಗೆ ಪಂದ್ಯ ಮುಗಿದ ಬಳಿಕ ಆರ್ಸಿಬಿ ವೇಗಿ ಯುವ ಆಟಗಾರ ಪರಾಗ್ ಕೈಕುಲುಕದೇ ಕ್ರೀಡಾಸ್ಪೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.
ರಾಜಸ್ಥಾನ್ ಮೊದಲು ಬ್ಯಾಟಿಂಗ್ ಮಾಡುವ ವೇಳೆ ಹರ್ಷಲ್ ಪಟೇಲ್ ಎಸೆದ 20ನೇ ಓವರ್ನಲ್ಲಿ ಬೌಂಡರಿ ಮತ್ತು 2 ಸಿಕ್ಸರ್ ಸಿಡಿಸಿದ್ದರು. ಇನ್ನಿಂಗ್ಸ್ ಮುಗಿಸಿ ಮೈದಾನಕ್ಕೆ ಪರಾಗ್ ಹೋಗುವ ವೇಳೆ ಹರ್ಷಲ್ ಪಟೇಲ್ ಯುವ ಬ್ಯಾಟರ್ನನ್ನು ಕೆಣಕಿದ್ದು, ಇದಕ್ಕೆ ಆತ ಕೂಡ ಕೋಪದಿಂದಲೇ ಉತ್ತರಿಸಿದ್ದಾರೆ. ಇಬ್ಬರ ನಡುವೆ ಜಗಳ ಹೆಚ್ಚಾಗುತ್ತಿದ್ದಾಗ ಎರಡೂ ಕಡೆಯ ಆಟಗಾರರು ಇಬ್ಬರನ್ನು ಸಮಾಧಾನಪಡಿಸಿ ಕರೆದೊಯ್ದರು..
145 ರನ್ಗಳ ಸಾಧಾರಣ ಗುರಿ ಬೆನ್ನಟ್ಟಲಾಗದೇ ಆರ್ಸಿಬಿ 115 ರನ್ಗಳಿಗೆ ಆಲೌಟ್ ಆಗಿ 29 ರನ್ಗಳಿಂದ ಈ ಪಂದ್ಯವನ್ನು ಕಳೆದುಕೊಂಡಿತ್ತು. ಹರ್ಷಲ್ ಪಟೇಲ್ ಕೊನೆಯ ಬ್ಯಾಟರ್ ಆಗಿ ಔಟಾಗಿದ್ದರು. ಪಂದ್ಯ ಮುಗಿದ ಬಳಿಕ ಪರಾಗ್ ಎಲ್ಲಾ ಆಟಗಾರರಿಗೂ ಶೇಕ್ ಹ್ಯಾಂಡ್ ಮಾಡಿಕೊಂಡು ಹರ್ಷಲ್ ಬಳಿ ಬಂದಾಗ ಆರ್ಸಿಬಿ ಬೌಲರ್ ಕೋಪದಿಂದ ಕೈಕುಲುಕದೇ ಮುಂದೆ ಸಾಗಿದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅನುಭವಿ ಕ್ರಿಕೆಟಿಗನಾಗಿರುವ ಹರ್ಷಲ್ 20 ವರ್ಷ ಆಟಗಾರನ ಜೊತೆಗೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಟೀಕಿಸುತ್ತಿದ್ದಾರೆ.
ಪರಾಗ್ ಅವರ ಅಜೇಯ ಅರ್ಧಶತಕದ ನೆರವಿನಿಂದ ರಾಜಸ್ಥಾನ್ ರಾಯಲ್ಸ್ 144 ರನ್ಗಳ ಸಾಧಾರಣ ಮೊತ್ತ ದಾಖಲಿಸಿತ್ತು. ಆದರೆ ಆರ್ಸಿಬಿ ಕೇವಲ 115 ರನ್ಗಳಿಗೆ ಆಲೌಟ್ ಆಗುವ ಮೂಲಕ 29 ರನ್ಗಳ ಸೋಲು ಕಂಡಿತು. ಪರಾಗ್ 31 ಎಸೆತಗಳಲ್ಲಿ 4 ಸಿಕ್ಸರ್ ಮತ್ತು 3 ಬೌಂಡರಿಗಳ ಸಹಿತ ಅಜೇಯ 56 ರನ್ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ:ಆರ್ಆರ್ ಬೌಲಿಂಗ್ ಎದುರು ಧೂಳಿಪಟವಾದ ಆರ್ಸಿಬಿ... ಸ್ಯಾಮ್ಸನ್ ಬಳಗಕ್ಕೆ 29 ರನ್ಗಳ ಜಯ