ದುಬೈ: ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ಚೆಂಡು ಹಾರ್ದಿಕ್ ಪಾಂಡ್ಯ ಅವರ ಭುಜಕ್ಕೆ ಬಡಿದಿತ್ತು. ಇದರಿಂದ ಗಾಯಗೊಂಡಿದ್ದ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡಿರಲಿಲ್ಲ, ಇವರ ಬದಲಿಗೆ ಮೀಸಲು ಆಟಗಾರ ಇಶಾನ್ ಕೀಶನ್ ಫೀಲ್ಡಿಂಗ್ ಮಾಡಿದ್ದರು. ಅಂದೇ ಪಾಂಡ್ಯ ಅವರನ್ನ ಸಿಟಿ ಸ್ಕ್ಯಾನ್‌ಗಾಗಿ ಕರೆದೊಯ್ಯಲಾಗುತ್ತಿದೆ ಎಂದು ಬಿಸಿಸಿಐ ತಿಳಿಸಿತ್ತು.
ಗಾಯಗೊಂಡಿದ್ದ ಭಾರತ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬಗ್ಗೆ ಈಗ ಶುಭ ಸುದ್ದಿ ಒಂದು ಬಂದಿದೆ. ಹಾರ್ದಿಕ್ ಪಾಂಡ್ಯ ಅವರ ಗಾಯ ತುಂಬಾ ಗಂಭೀರವಾಗಿಲ್ಲ, ಆದ್ದರಿಂದ ಅವರು ಮುಂದಿನ ಪಂದ್ಯಗಳಲ್ಲಿ ಆಡಬಹುದು ಎಂದು ಹೇಳಲಾಗುತ್ತದೆ.
ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಎಂಟು ಎಸೆತಗಳಲ್ಲಿ 11 ರನ್ ಗಳಿಸಿದ್ದ ಪಾಂಡ್ಯ, ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾಗೆ ಕೊಂಚ ಹಿನ್ನಡೆಯಾಗಿತ್ತು.
ಹಾರ್ದಿಕ್ ಪಾಂಡ್ಯ ಟಿ-20 ವಿಶ್ವಕಪ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯುತ್ತಾರೆ ಎನ್ನಲಾಗಿತ್ತು. ಆದರೀಗ ಹಾರ್ದಿಕ್ ಪಾಂಡ್ಯ ಅವರ ಫಿಟ್‌ನೆಸ್ ವರದಿ ಹೊರಬಿದ್ದಿದ್ದು, ನ್ಯೂಜಿಲ್ಯಾಂಡ್ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡಲಿದ್ದಾರೆ ಎಂದು ವರದಿಯಾಗಿದೆ.
ಎಎನ್‌ಐ ಸುದ್ದಿ ಸಂಸ್ಥೆಗೆ ತಂಡದ ಸಿಬ್ಬಂಧಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದು, ಹಾರ್ದಿಕ್ ಪಾಂಡ್ಯ ಆರೋಗ್ಯವಾಗಿದ್ದಾರೆ. ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ. ಮುನ್ನೆಚ್ಚರಿಕೆಯಾಗಿ ಹಾರ್ದಿಕ್ ಪಾಂಡ್ಯಗೆ ಸಿಟಿ ಸ್ಕ್ಯಾನ್ ಮಾಡಿಸಲಾಗಿದೆ, ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.