ಮುಂಬೈ :ಫಿಟ್ನೆಸ್ ಸಮಸ್ಯೆಯಿಂದ ಭಾರತ ಟೆಸ್ಟ್ ತಂಡದಿಂದ ಹೊರ ಬಿದ್ದಿರುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗಾಗಲೇ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ತಮ್ಮನ್ನು ಪರಿಗಣಿಸದಂತೆ ಮನವಿ ಮಾಡಿದ್ದರು. ಇದೀಗ ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯನ್ನು ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ.
ಹಾರ್ದಿಕ್ ಪಾಂಡ್ಯ ಬೆನ್ನು ಶಸ್ತ್ರ ಚಿಕಿತ್ಸೆಗೆ ಒಳಗಾದಾಗಿನಿಂದಲೂ ಬೌಲಿಂಗ್ ಮಾಡುವುದನ್ನು ನಿಲ್ಲಿಸಿದ್ದಾರೆ. ಆದರೆ, ಭಾರತ ತಂಡದಲ್ಲಿ ಆಲ್ರೌಂಡರ್ ಆಗಿ ಅವಕಾಶ ಪಡೆದಿರುವ ಅವರನ್ನು ಬೌಲಿಂಗ್ ಮಾಡಲು ಸಾಧ್ಯವಾಗದಿದ್ದರೆ ತಂಡದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ ಎಂದು ಆಯ್ಕೆ ಸಮಿತಿ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಕಾರಣದಿಂದ ತರಬೇತಿಯಲ್ಲಿರುವ ಅವರು ತಮ್ಮ ಬೌಲಿಂಗ್ ಉತ್ತಮಗೊಳಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ ಜನವರಿಯಲ್ಲಿ ನಡೆಯಲಿರುವ 3 ಪಂದ್ಯಗಳ ಏಕದಿನ ಸರಣಿಗೆ ತಮ್ಮನ್ನು ಪರಿಗಣಿಸದಿರುವಂತೆ ಮನವಿ ಮಾಡಿದ್ದ ಹಾರ್ದಿಕ್ ಪಾಂಡ್ಯ ಮುಂಬೈನಲ್ಲಿ ಪುನಶ್ಚೇತನಕ್ಕೆ ಒಳಗಾಗಿದ್ದರು. ಇದೀಗ ಬಿಸಿಸಿಐ ಅವರನ್ನು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ತೆರಳಿ ತರಬೇತಿ ಆರಂಭಿಸಲು ಸೂಚನೆ ನೀಡಿದೆ ಎಂದು ತಿಳಿದು ಬಂದಿದೆ.
2022ರ ಮೊದಲ ತಿಂಗಳಿನಲ್ಲಿ ತರಬೇತಿ ಪಡೆಯುವಂತೆ ಸೂಚಿಸಲಾಗಿರುವುದರಿಂದ ಫೆಬ್ರವರಿಯಲ್ಲಿ ತವರಿನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ ಸೀಮಿತ ಓವರ್ಗಳ ಸರಣಿಯನ್ನೂ ತಪ್ಪಿಸಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗಿದೆ. ವಿಂಡೀಸ್ ವಿರುದ್ಧ ಫೆಬ್ರವರಿ 6,9 ಮತ್ತು 12ರಂದು ಏಕದಿನ ಪಂದ್ಯಗಳು ಮತ್ತು ಫೆಬ್ರವರಿ 15,18 ಮತ್ತು 20 ರಂದು ಟಿ20 ಪಂದ್ಯಗಳು ನಡೆಯಲಿವೆ.
ಇದನ್ನೂ ಓದಿ:ಮತ್ತೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ ನ್ಯೂಜಿಲ್ಯಾಂಡ್, 5 ತಿಂಗಳ ಅಂತರದಲ್ಲಿ 15 ಪಂದ್ಯಗಳ್ನಾಡಲಿರುವ ಕಿವೀಸ್