ಹೈದರಾಬಾದ್:ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರು ಕೇವಲ ಒಂದೆರೆಡು ಪಂದ್ಯಗಳಲ್ಲಿ ದೇಶವನ್ನ ಪ್ರತಿನಿಧಿಸಿದರೆ ಸಾಕು, ಅವರಿಗೆ ಇನ್ನಿಲ್ಲದ ಬೇಡಿಕೆ ಸಿಗಲು ಶುರುವಾಗುತ್ತದೆ. ಆದರೆ ಇಲ್ಲೊಬ್ಬ ಕ್ರಿಕೆಟ್ ಆಟಗಾರ 2011ರ ಐಸಿಸಿ ವಿಶ್ವಕಪ್ ಫೈನಲ್, ಇಂಡಿಯನ್ ಪ್ರೀಮಿಯರ್ ಲೀಗ್ನಂತಹ ಟೂರ್ನಿಗಳಲ್ಲಿ ಆಡಿದ್ದರೂ, ಇದೀಗ ಬಸ್ ಡ್ರೈವರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಶ್ರೀಲಂಕಾದ ದಿಗ್ಗಜ ಆಟಗಾರರಾದ ಮಹೇಲಾ ಜಯವರ್ದನೆ, ಕುಮಾರ್ ಸಂಗಕ್ಕರ್, ಮೆಂಡಿಸ್ ಹಾಗೂ ಸನತ್ ಜಯಸೂರ್ಯನಂತಹ ಆಟಗಾರರೊಂದಿಗೆ ಮೈದಾನ ಹಂಚಿಕೊಂಡಿದ್ದ ಆಟಗಾರನೋರ್ವ ಇದೀಗ ಆಸ್ಟ್ರೇಲಿಯಾದ ಮೆಲ್ಬೋರ್ನ್ನಲ್ಲಿ ಬಸ್ ಡ್ರೈವರ್ ಆಗಿ ಜೀವನ ಸಾಗಿಸುತ್ತಿದ್ದಾರೆ.
2011ರಲ್ಲಿ ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವೆ ನಡೆದಿದ್ದ ಐಸಿಸಿ ಏಕದಿನ ವಿಶ್ವಕಪ್ ಫೈನಲ್ ತಂಡದಲ್ಲಿದ್ದ ಲಂಕಾ ಆಫ್ ಸ್ಪಿನ್ನರ್ ಸೂರಜ್ ರಂದೀವ್ ಇದೀಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಅದರಿಂದ ಬರುವ ಹಣದಿಂದಲೇ ಕುಟುಂಬ ನಿರ್ವಹಿಸುತ್ತಿದ್ದಾರೆ.