ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧ ಪಾಕಿಸ್ತಾನದ ಅವಮಾನಕರ ಸೋಲಿನ ಬಳಿಕ ಪಾಕ್ನ ಮಾಜಿ ಕ್ರಿಕೆಟಿಗರು ತಂಡದ ನಿರ್ವಹಣೆ, ಪಿಸಿಬಿ ಚೇರ್ಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಮೆಗಾ ಈವೆಂಟ್‌ಗೆ ಆಟಗಾರರ ಆಯ್ಕೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಗುರುವಾರ ಪರ್ತ್ನಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ರೋಮಾಂಚಕ ಮುಖಾಮುಖಿಯಲ್ಲಿ ಪಾಕಿಸ್ತಾನ ಒಂದು ರನ್‌ನಿಂದ ಸೋಲುಂಡು ಇಕ್ಕಟ್ಟಿಗೆ ಸಿಲುಕಿದೆ.
ಪಾಕ್ ಸೆಮಿಫೈನಲ್ ಹಾದಿ ಕಠಿಣ:ತಾನಾಡಿದ ಎರಡು ಪಂದ್ಯಗಳಲ್ಲೂ ಮುಖಭಂಗ ಅನುಭವಿಸಿರುವ ಪಾಕ್ ಸೆಮಿಫೈನಲ್ ಹಾದಿ ಕಷ್ಟಕರವಾಗಿದೆ. ಮಾಜಿ ವೇಗಿ ಮೊಹಮ್ಮದ್ ಅಮೀರ್ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮತ್ತು ಮುಖ್ಯ ಆಯ್ಕೆಗಾರ ಮೊಹಮ್ಮದ್ ವಾಸಿಮ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ. 'ಮೊದಲ ದಿನದಿಂದಲೂ ನಾನು ತಂಡವು ಕಳಪೆ ಆಯ್ಕೆಯಾಗಿದೆ ಎಂದಿದ್ದೆ. ಈಗ ಹೀನಾಯ ಪ್ರದರ್ಶನದ ಹೊಣೆ ಯಾರು ಹೊರುತ್ತಾರೆ? ಇದು ಸೋ ಕಾಲ್ಡ್ ಪಿಸಿಬಿ ಚೇರ್ಮನ್ ಹಾಗೂ ಮುಖ್ಯ ಆಯ್ಕೆಗಾರರನ್ನು ಕಿತ್ತೊಗೆಯಲು ಸೂಕ್ತ ಸಮಯವಾಗಿದೆ ಎಂದೆನಿಸುತ್ತದೆ' ಎಂದು ಅಮೀರ್ ಟ್ವೀಟ್ ಮಾಡಿದ್ದಾರೆ.
ಶೋಯೆಬ್ ಅಖ್ತರ್ ಕೂಡ ನಾಯಕ ಬಾಬರ್ ಅಜಂ ಸೇರಿದಂತೆ ತಂಡದ ಪ್ರದರ್ಶನಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ನಾನು ಇದನ್ನು ಪದೇ ಪದೆ ಹೇಳುತ್ತಿದ್ದೇನೆ, ತಂಡದ ಈಗಿನ ಆರಂಭಿಕ ಆಟಗಾರರು, ಮಧ್ಯಮ ಕ್ರಮಾಂಕದಿಂದ ನಾವು ಯಶಸ್ಸು ನಿರೀಕ್ಷಿಸಲು ಸಾಧ್ಯವಿಲ್ಲ ಎಂದಿದ್ದೆ. ಈಗ ನಾನೇನು ಹೇಳಲಿ?' ಎಂದಿದ್ದಾರೆ.
ಅಖ್ತರ್ ಗರಂ:'ಪಾಕಿಸ್ತಾನ ತಂಡವು ಒಬ್ಬ ಕೆಟ್ಟ ನಾಯಕನನ್ನು ಹೊಂದಿದೆ. ಎರಡನೇ ಪಂದ್ಯದಲ್ಲಿಯೇ ಸೋತು ಪಾಕಿಸ್ತಾನ ವಿಶ್ವಕಪ್‌ನಿಂದ ಹೊರಬಿದ್ದಿದೆ, ಅದೂ ಕೂಡ ಜಿಂಬಾಬ್ವೆ ವಿರುದ್ಧ ಸೋತಿದೆ. ಬಾಬರ್ ಮೂರನೇ ಕ್ರಮಾಂಕದಲ್ಲಿ ಆಡಬೇಕು, ಆದರೆ, ನಮ್ಮ ಮಾತನ್ನು ಅವರು ಕೇಳುವುದಿಲ್ಲ. ಶಾಹೀನ್ ಅಫ್ರಿದಿ ಫಿಟ್‌ನೆಸ್ ಕೂಡ ಪ್ರಮುಖ ಹಿನ್ನಡೆಯಾಗಿದೆ. ನಾಯಕತ್ವ ಹಾಗೂ ತಂಡದ ನಿರ್ವಹಣೆಯು ನ್ಯೂನತೆಯಿಂದ ಕೂಡಿದೆ' ಎಂದು ಅಖ್ತರ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿಕೊಂಡಿದ್ದಾರೆ.