ಹೈದರಾಬಾದ್ (ತೆಲಂಗಾಣ) : ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ ಅವರನ್ನು ಆಯ್ಕೆ ಮಾಡದೇ ಇರುವುದಕ್ಕೆ ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಬಿಸಿಸಿಐ ಮತ್ತು ರಾಷ್ಟ್ರೀಯ ಆಯ್ಕೆಗಾರರ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಂಬೈ ತಂಡ ಪ್ರತಿನಿಧಿಸುತ್ತಿರುವ 25ರ ಹರೆಯದ ಸರ್ಫರಾಜ್ ದೇಶೀ ಕ್ರಿಕೆಟ್‌ನಲ್ಲಿ ಉತ್ತಮ ರನ್ ಗಳಿಸುತ್ತಿದ್ದಾರೆ. ಇಂಥ ಆಟಗಾರನಿಗೆ ಅವಕಾಶ ಸಿಗದಿರುವುದನ್ನು ಅವರು ಅನ್ಯಾಯ ಎಂದಿದ್ದಾರೆ.
ರಣಜಿಯಲ್ಲಿ ಸತತ ಶತಕ: ಮಂಗಳವಾರ ಸರ್ಫರಾಜ್ ಮತ್ತೊಂದು ಶತಕ ಗಳಿಸಿದ್ದಾರೆ. ಈ ಮೂಲಕ ರಣಜಿ ಟ್ರೋಫಿ ಗುಂಪಿನ ಬಿ ಪಂದ್ಯದಲ್ಲಿ ದೆಹಲಿ ವಿರುದ್ಧ 13ನೇ ಪ್ರಥಮ ದರ್ಜೆ ಶತಕ ದಾಖಲಿಸಿದ್ದಾರೆ. ರಣಜಿ ಟ್ರೋಫಿಯ ಈ ಆವೃತ್ತಿಯಲ್ಲಿ ಸರ್ಫರಾಜ್ ಅವರ 3ನೇ ಶತಕ ಇದಾಗಿದೆ. ಕಳೆದೆರಡು ರಣಜಿ ಟ್ರೋಫಿಯಲ್ಲಿ ಸರ್ಫರಾಜ್ ಕೇವಲ 12 ಪಂದ್ಯಗಳಿಂದ 1,910 ರನ್ ಗಳಿಸಿದ್ದರು. 136.42 ಸರಾಸರಿಯಲ್ಲಿ ಬ್ಯಾಟ್ ಬೀಸಿದ್ದರು.
ಮೂರು ದೇಶೀಯ ಟೂರ್ನಿಯಲ್ಲಿ ಸರ್ಫರಾಜ್ ಉತ್ತಮ ಪ್ರದರ್ಶನ ನೀಡಿದರೂ ಅವರನ್ನು ಆಯ್ಕೆ ಮಾಡಲಾಗಿಲ್ಲ. ಇದು ಸರ್ಫರಾಜ್ಗೆ ಮಾತ್ರವಲ್ಲ, ದೇಶೀಯ ಕ್ರಿಕೆಟ್ಗೂ ಅನ್ಯಾಯ ಮಾಡಿದಂತೆ ಎಂದು ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಐಪಿಎಲ್ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ (ಪಂಜಾಬ್ ಕಿಂಗ್ಸ್) ತಂಡಗಳಲ್ಲಿ ಸರ್ಫರಾಜ್ ಉತ್ತಮವಾಗಿ ಆಡಿದ್ದಾರೆ ಎಂದು ಹೇಳಿದ್ದಾರೆ.
ಸರ್ಫರಾಜ್ ರನ್ ಗಳಿಸಲು ಫಿಟ್ ಆಗಿದ್ದಾರೆ. ಅವರ ದೇಹದ ತೂಕಕ್ಕಿಂತ ಹೆಚ್ಚು ಕೆಜಿ ಹೊಂದಿರುವ ಅನೇಕರಿದ್ದಾರೆ ಎಂದು ಹೇಳಿರುವ ವೆಂಕಟೇಶ್ ಪ್ರಸಾದ್, ಫಿಟ್ ಇಲ್ಲ ಎಂದು ಕಾರಣ ನೀಡಿ ಸರ್ಫರಾಜ್ಅವರನ್ನು ಹೊರಗಿಡುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ವೆಂಕಿ ಈ ಹಿಂದೆ ಭಾರತಕ್ಕೆ ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಅಲ್ಲದೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳಿಗೂ ಕೋಚಿಂಗ್ ಮಾಡಿದ್ದರು.