ನವದೆಹಲಿ :ಭಾರತದ ರಾಷ್ಟ್ರೀಯ ಆಟ ಹಾಕಿ ಆದರೂ, ಸಹ ಕ್ರಿಕೆಟ್ ಅನ್ನು ಅತಿ ಹೆಚ್ಚು ಜನ ಆಡುವುದರ ಜೊತೆಗೆ ಪ್ರೋತ್ಸಾಹಿಸುತ್ತಾರೆ. ಅಲ್ಲದೇ, ತಮ್ಮ ನೆಚ್ಚಿನ ಕ್ರಿಕೆಟ್ ಆಟಗಾರನನ್ನು ನೋಡಬೇಕು ಎಂದು ಎಷ್ಟೋ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ಅವಕಾಶ ಸಿಕ್ಕಗೆಲ್ಲ ಆಟಗಾರರನ್ನು ನೋಡಿ ಕಣ್ತುಂಬಿಕೊಳ್ಳುತ್ತಾರೆ. ಕೆಲವೊಮ್ಮೆ ಅವಕಾಶಗಳನ್ನು ಸೃಷ್ಟಿ ಮಾಡಿಕೊಂಡು ತಮ್ಮ ಪ್ರೀತಿಯ ಆಟಗಾರರಿಗೆ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿರುವ ಸಾಕಷ್ಟು ಉದಾಹರಣೆಗಳಿವೆ.
ಅಂತಹುದೇ ಒಂದು ಘಟನೆ ನಿನ್ನೆ (ಭಾನುವಾರ) ಮಧ್ಯಪ್ರದೇಶದ ಇಂದೋರ್ನ ಹೋಳ್ಕರ್ ಮೈದಾನದಲ್ಲಿ ಭಾರತ ಮತ್ತು ಅಪ್ಘಾನಿಸ್ತಾನ ನಡುವೆ ನಡೆದ ಎರಡನೇ ಟಿ- 20 ಪಂದ್ಯದಲ್ಲಿ ನಡೆದಿದೆ. ಅಪ್ಘಾನ್ ಬ್ಯಾಟಿಂಗ್ ವೇಳೆ ಫೀಲ್ಡಿಂಗ್ ಮಾಡುತ್ತಿದ್ದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯನ್ನು ಭೇಟಿಯಾಗಬೇಕು ಎಂದು ಹುಚ್ಚು ಅಭಿಮಾನಿಯೊಬ್ಬ ಭದ್ರತೆಯನ್ನು ಮೀರಿ ಮೈದಾದೊಳಗೆ ಹಾರಿ ಬಂದಿದ್ದನು. ಈ ಸಂದರ್ಭದಲ್ಲಿ ಬೌಂಡರಿ ಗೆರೆಯಲ್ಲಿ ನಿಂತಿದ್ದ ಕೊಹ್ಲಿ ಒಂದು ಚೂರೂ ಅಲುಗಾಡದೇ ಮೈದಾನದೊಳಗೆ ಓಡಿ ಬರುತ್ತಿದ್ದ ಅಭಿಮಾನಿಯ ಕನಸನ್ನು ನನಸು ಮಾಡಿದ್ದಾರೆ.
ನೇರವಾಗಿ ಕೊಹ್ಲಿ ಇದ್ದ ಕಡೆಗೆ ಬಂದ ಅಭಿಮಾನಿ ಕಾಲಿಗೆ ಬಿದ್ದು ನಮಸ್ಕಾರ ಮಾಡಿದನು. ಬಳಿಕ ಕೊಹ್ಲಿಗೆ ಪ್ರೀತಿ ಅಪ್ಪುಗೆ ನೀಡಿದನು. ಅಷ್ಟರಲ್ಲೇ ಭದ್ರತಾ ಸಿಬ್ಬಂದಿ ತಕ್ಷಣ ಬಂದು ಅಭಿಮಾನಿಯನ್ನು ಮೈದಾನದಿಂದ ಹೊರ ಕರೆದೊಯ್ದರು. ಇದೀಗ ಈ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.