ನವದೆಹಲಿ:ಗುತ್ತಿಗೆಯಲ್ಲಿರುವ ಮಹಿಳಾ ಕ್ರಿಕೆಟ್ ಆಟಗಾರ್ತಿಯರಿಗೆ ಪುರುಷರಷ್ಟೇ ಸಮಾನ ವೇತನ ನೀಡುವುದಾಗಿ ಘೋಷಿಸಿದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ(ಬಿಸಿಸಿಐ) ನಿರ್ಧಾರವನ್ನು ರಾಷ್ಟ್ರೀಯ ಮಹಿಳಾ ಆಯೋಗ ಸ್ವಾಗತಿಸಿದೆ. ಅಲ್ಲದೇ, "ಇದೊಂದು ಐತಿಹಾಸಿಕ ನಿರ್ಣಯ" ಎಂದು ಕೊಂಡಾಡಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಆಯೋಗ ರಾಷ್ಟ್ರೀಯ ಅಧ್ಯಕ್ಷೆ ರೇಖಾ ಶರ್ಮಾ, "ಇದು ಭಾರತ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿಯೇ ಐತಿಹಾಸಿಕ ನಿರ್ಧಾರ. ಆಟಗಾರ್ತಿಯರಿಗೆ ಸಿಕ್ಕ ಜಯ. ಮಹಿಳಾ ಕ್ರಿಕೆಟಿಗರು, ಪುರುಷರಷ್ಟೇ ವೇತನ ಪಡೆಯುವುದು ಸಮಾನತೆಯ ಹೊಸ ಯುಗಕ್ಕೆ ನಾಂದಿ ಹಾಡಿದಂತಾಗಿದೆ. ಲಿಂಗ ಸಮಾನತೆಯನ್ನು ಸಾಧಿಸುವಲ್ಲಿಯೂ ಇದು ಮಹತ್ವದ ಹೆಜ್ಜೆ" ಎಂದು ಹೇಳಿದರು.
ಬಿಸಿಸಿಐನ ಈ ನಿರ್ಧಾರವು ಯುವ ಪ್ರತಿಭೆಗಳಿಗೆ ಕ್ರೀಡೆಯ ಮೇಲಿನ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಲಿದೆ. ಇದನ್ನು ಇತರ ಕ್ರೀಡಾ ಸಂಸ್ಥೆಗಳೂ ಅನುಸರಿಸಬೇಕು ಎಂದು ಆಯೋಗ ಕೋರಿದೆ.
ಲಿಂಗ ತಾರತಮ್ಯವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಬಿಸಿಸಿಐ ಕೇಂದ್ರೀಯ ಗುತ್ತಿಗೆಯ ಮಹಿಳಾ ಮತ್ತು ಪುರುಷ ಆಟಗಾರರಿಗೆ ಸಮಾನವಾಗಿ ಪಂದ್ಯದ ಶುಲ್ಕವನ್ನು ನೀಡುವುದಾಗಿ ಇಂದು ಘೋಷಿಸಿತು. ಈ ನಿರ್ಧಾರದ ಪ್ರಕಾರ, ಮಹಿಳಾ ಕ್ರಿಕೆಟಿಗರು ಪ್ರತಿ ಟೆಸ್ಟ್‌ಗೆ 15 ಲಕ್ಷ ರೂಪಾಯಿ, ಏಕದಿನ ಪಂದ್ಯವೊಂದಕ್ಕೆ 6 ಲಕ್ಷ ರೂ. ಮತ್ತು ಟಿ-20 ಗೆ 3 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಸಮಾನ ವೇತನ ನೀಡಬೇಕು ಎಂದು ಮಹಿಳಾ ಕ್ರಿಕೆಟಿಗರು ಬಹುದಿನಗಳಿಂದ ಬೇಡಿಕೆ ಮಂಡಿಸಿದ್ದರು.
ಆಟಗಾರ್ತಿಯರಿಂದ ಸೆಲ್ಯೂಟ್: ತಮ್ಮ ವೇತನ ಹೆಚ್ಚಳ ಮಾಡಿದ್ದಕ್ಕೆ ಮಹಿಳಾ ಕ್ರಿಕೆಟಿಗರು ಬಿಸಿಸಿಐಗೆ ಧನ್ಯವಾದ ಹೇಳಿದ್ದಾರೆ. ವೇತನ ಸಮಾನತೆಯಿಂದ ದೇಶದಲ್ಲಿ ಮಹಿಳಾ ಕ್ರಿಕೆಟ್ ಇನ್ನಷ್ಟು ಬೆಳೆಯಲಿದೆ. ಈ ಐತಿಹಾಸಿಕ ನಿರ್ಧಾರವನ್ನು ಸ್ವಾಗತಿಸುವೆ ಎಂದು ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಹೇಳಿದ್ದಾರೆ. ಇದೊಂದು ಅದ್ಭುತ ಸುದ್ದಿ ಎಂದು ಡ್ಯಾಶಿಂಗ್ ಬ್ಯಾಟರ್ ಸ್ಮೃತಿ ಮಂದಾನ ಟ್ವೀಟ್ ಮಾಡಿದ್ದಾರೆ. ಹಾಲಿಯಲ್ಲದೇ, ಮಾಜಿ ಮಹಿಳಾ ಕ್ರಿಕೆಟ್ ಆಟಗಾರ್ತಿಯರು ಕೂಡ ಇದನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಇದನ್ನೂ ಓದಿ:ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಸಮಾನ ವೇತನ: ಮಹತ್ವದ ಘೋಷಣೆ ಮಾಡಿದ ಬಿಸಿಸಿಐ