ಎರಡು ಬಾರಿಯ ವಿಶ್ವಕಪ್ ವಿಜೇತ ತಂಡದ ಸದಸ್ಯೆ, ಅದ್ಭುತ ಬೌಲರ್ ಇಂಗ್ಲೆಂಡ್‌ನ 30 ವರ್ಷದ ಮಹಿಳಾ ಕ್ರಿಕೆಟರ್ ಅನ್ಯಾ ಶ್ರುಬ್ಸೋಲ್ ಎಲ್ಲ ಮಾದರಿಯ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಈ ಮೂಲಕ ಅವರು ತಮ್ಮ 14 ವರ್ಷಗಳ ಕ್ರಿಕೆಟ್ ಬದುಕಿನಿಂದ ಹಿಂದೆ ಸರಿದಿದ್ದಾರೆ.
2008 ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಅನ್ಯಾ ಶ್ರುಬ್ಸೋಲ್ ಇಲ್ಲಿಯವರೆಗೂ ಇಂಗ್ಲೆಂಡ್ ಪರವಾಗಿ ಮೂರೂ ಮಾದರಿಯ ಕ್ರಿಕೆಟ್ನಲ್ಲಿ 173 ಪಂದ್ಯಗಳಾಡಿದ್ದು, 227 ವಿಕೆಟ್ ಪಡೆದಿದ್ದಾರೆ. ಏಕದಿನ ತಂಡದ ಯಶಸ್ವಿ ಬೌಲರ್ ಆಗಿದ್ದ ಅನ್ಯಾ ಇಂಗ್ಲೆಂಡ್‌ನ ನಾಲ್ಕನೇ ಅತಿಹೆಚ್ಚು ವಿಕೆಟ್ ಟೇಕರ್ ಆಗಿದ್ದಾರೆ.
2017 ರ ವಿಶ್ವಕಪ್ ಹೀರೋ:ಎರಡು ಬಾರಿಯ ಆ್ಯಶಸ್ ವಿಜೇತ ತಂಡದ ಸದಸ್ಯರಾಗಿದ್ದ ಅನ್ಯಾ ಶ್ರುಬ್ಸೋಲ್ ತವರು ನೆಲದಲ್ಲಿ 2017 ರಲ್ಲಿ ನಡೆದಿದ್ದ ವಿಶ್ವಕಪ್ನ ಹೀರೋ ಆಗಿದ್ದರು. ಭಾರತ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಅನ್ಯಾ ದಾಖಲೆಯ 6 ವಿಕೆಟ್‌ಗಳನ್ನು ಪಡೆದು ತಂಡದ ಜಯಕ್ಕೆ ಕಾರಣರಾಗಿದ್ದರು. ಅಲ್ಲದೇ ಇದು ಅವರ ಅಂತರರಾಷ್ಟ್ರೀಯ ವೃತ್ತಿಜೀವನದ ಸ್ಮರಣೀಯ ಪ್ರದರ್ಶನವಾಗಿದೆ.