ರಾವಲ್ಪಿಂಡಿ(ಪಾಕಿಸ್ತಾನ):ಪಾಕಿಸ್ತಾನ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನವೇ 506 ರನ್ ದಾಖಲಿಸುವ ಮೂಲಕ 112 ವರ್ಷಗಳ ಹಿಂದಿನ ದಾಖಲೆ ಪುಡಿಗಟ್ಟಿತು. ಒಂದೇ ದಿನದಲ್ಲಿ ಯಾವುದೇ ತಂಡ ಇಷ್ಟು ರನ್ ಬಾರಿಸಿದ ಇತಿಹಾಸವೇ ಇಲ್ಲ. 1910 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಸ್ಟ್ರೇಲಿಯಾ ಒಂದೇ ದಿನದಲ್ಲಿ 494 ರನ್ ಗಳಿಸಿದ್ದೇ ಈವರೆಗಿನ ದಾಖಲೆಯಾಗಿತ್ತು.
ರಾವಲ್ಪಿಂಡಿ ಮೈದಾನದಲ್ಲಿ ಇಂದಿನಿಂದ ಆರಂಭವಾಗಿರುವ ಮೊದಲ ಟೆಸ್ಟ್ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಇಂಗ್ಲೆಂಡ್ ಆಟಗಾರರು 4 ಶತಕ ಬಾರಿಸಿದರು. ಮೊದಲ ದಿನದಾಟದ ಅಂತ್ಯಕ್ಕೆ 4 ವಿಕೆಟ್ಗೆ 506 ರನ್ ಗಳಿಸಿದೆ. ಮಂದ ಬೆಳಕಿನ ಕಾರಣ ಇನ್ನೂ 15 ಓವರ್ ಬಾಕಿ ಇರುವಾಗಲೇ ಆಟ ಮುಕ್ತಾಯಗೊಳಿಸಲಾಯಿತು.
ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ಗೆ ಝಾಕ್ ಕ್ರಾವ್ಲೇ, ಬೆನ್ ಡಕ್ಕೆಟ್ ಭರ್ಜರಿ ಓಪನಿಂಗ್ ನೀಡಿದರು. ವೇಗದ ದ್ವಿಶತಕದ ಜೊತೆಯಾಟವಾಡಿದ ಇಬ್ಬರು ದಾಂಡಿಗರು ವೈಯಕ್ತಿಕ ಶತಕ ಬಾರಿಸಿದರು. ಝಾಕ್ ಕ್ರಾವ್ಲೇ 122 ರನ್ ಮಾಡಿದರೆ, ಬೆನ್ ಡಕ್ಕೆಟ್ 107 ಉದ್ದರಿ ಗಳಿಸಿ ಔಟಾದರು. ಬಳಿಕ ಬಂದ ಓಲಿ ಪೋಪ್ ಕೂಡ ಬಿರುಸಿನ ಬ್ಯಾಟ್ ಮಾಡಿ 108 ರನ್ ಗಳಿಸಿದರು.
ಝಾಕ್ ಕ್ರಾವ್ಲೇ ಔಟಾದ ಬಳಿಕ ಬಂದ ಜೋ ರೂಟ್ 23 ರನ್ ಗಳಿಸಿ ವಿಕೆಟ್ ನೀಡಿದರು. ಮೈದಾನಕ್ಕಿಳಿದ ಹ್ಯಾರಿ ಬ್ರೂಕ್ಸ್ ದಾಖಲೆಯ ಮತ್ತು ಚೊಚ್ಚಲ ಶತಕ ಬಾರಿಸಿದರು. ಔಟಾಗದೇ 101 ರನ್ ಗಳಿಸಿರುವ ಬ್ರೂಕ್ಸ್, ಬೆನ್ ಸ್ಟೋಕ್ಸ್(34) ಜೊತೆಗೂಡಿ ನಾಳೆಗೆ ವಿಕೆಟ್ ಕಾಯ್ದುಕೊಂಡಿದ್ದಾರೆ.
ದಿನದಾಟದ ಕೊನೆಯ 75 ನೇ ಓವರ್ನಲ್ಲಿ ಇಂಗ್ಲೆಂಡ್ 494 ರನ್ ಗಳಿಸಿ 1910 ರಲ್ಲಿ ಆಸ್ಟ್ರೇಲಿಯಾ ಬರೆದಿದ್ದ ದಾಖಲೆಯನ್ನು ಸರಿಗಟ್ಟಿತು. ಮೊಹಮದ್ ಅಲಿ ಎಸೆದ ಓವರ್ನಲ್ಲಿ ಸಿಕ್ಸರ್ ಬಾರಿಸಿದ ಬೆನ್ ಸ್ಟೋಕ್ಸ್ ಟೆಸ್ಟ್ನಲ್ಲಿ ತಂಡ ಹೊಸ ದಾಖಲೆ ಬರೆಯುವಂತೆ ಮಾಡಿದರು. ಮಂದಬೆಳಕಿನ ಕಾರಣ 75 ಓವರ್ಗೆ ಆಟ ನಿಂತಾಗ ಇಂಗ್ಲೆಂಡ್ 506 ರನ್ ಗಳಿಸಿತು.
ಟೆಸ್ಟ್ನಲ್ಲಿ ಒಂದೇ ದಿನದಲ್ಲಿ ದಾಖಲಾದ ರನ್ಗಳು